ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭಿಸುವ ಕುರಿತು ಕ್ರಮ : ಸವದಿ

ಬೆಂಗಳೂರು,ಡಿ.9- ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿ ನೂತನ ಪ್ರಾದೇಶಿಕ ಸಾರಿಗೆ ಕಚೇರಿ ಪ್ರಾರಂಭಿಸುವ ಬಗ್ಗೆ ಅಕಾರಿಗಳ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದರು.

ಪ್ರಶ್ನೋತ್ತರ ಅವಯಲ್ಲಿ ಶಾಸಕ ಶಿವಕುಮಾರ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಉಡುಪಿ ಜಿಲ್ಲೆಯಲ್ಲಿ ಒಂದೇ ಪ್ರಾದೇಶಿಕ ಸಾರಿಗೆ ಕಚೇರಿ ಇರುವುದರಿಂದ ದೂರದ ಬೈಂದರೂ ಮತ್ತು ಕುಂದಾಪುರ ತಾಲ್ಲೂಕಿನ ಸಾರ್ವಜನಿಕರ ದೈನಂದಿನ ವ್ಯವಹಾರಗಳಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಅಕಾರಿಗಳ ಸಭೆ ಕರೆಯುವುದಾಗಿ ತಿಳಿಸಿದರು.

ಬೈಂದೂರು ಅಥವಾ ಕುಂದಾಪುರದಲ್ಲಿ ಆರ್‍ಟಿಒ ಕಚೇರಿ ಸ್ಥಾಪಿಸಲು ನಮಗೆ ಹಣಕಾಸಿನ ಸಮಸ್ಯೆಯಿದೆ. ಕೋವಿಡ್ ಬಂದ ನಂತರ ನಾವು ಹೊಸ ಯೋಜನೆಗಳನ್ನಾಗಲಿ, ಕಾರ್ಯಕ್ರಮಗಳನ್ನಾಗಲಿ ಆರಂಭಿಸದಂತೆ ಆರ್ಥಿಕ ಇಲಾಖೆ ಅಕಾರಿಗಳು ಸಲಹೆ ಮಾಡಿದ್ದಾರೆ.

ಕುಂದಾಪುರ ಮತ್ತು ಬೈಂದೂರಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿ ಮಂಗಳವಾರ ಇಲಾಖೆ ವತಿಯಿಂದ ಶಿಬಿರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಅದನ್ನು ಮುಂದುವರೆಸುವುದಾಗಿ ಸವದಿ ತಿಳಿಸಿದರು.

Sri Raghav

Admin