ಮಾತೃಪೂರ್ಣ ಫಲಾನುಭವಿಗಳಿಗೆ ಬಿಸಿಯೂಟ ವಿತರಣೆ

ಬೆಂಗಳೂರು, ಮಾ.17- ಕೋವಿಡ್ -19ರ ಸಾಂಕ್ರಾಮಿಕ ರೋಗದ ಮಾರ್ಗ ಸೂಚಿ ಸಡಿಲಿಕೆಯಾದ ನಂತರ ಮಾತೃಪೂರ್ಣ ಫಲಾನುಭವಿಗಳಿಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಬಿಸಿಯೂಟ ತಯಾರಿಸಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣಸವದಿ ವಿಧಾನಸಭೆಯಲ್ಲಿ ತಿಳಿಸಿದರು.

ಕಾಂಗ್ರೆಸ್ ಶಾಸಕ ಇ.ತುಕಾರಾಂ ಅವರ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪರವಾಗಿ ಉತ್ತರಿಸಿದ ಅವರು, ಅಂಗನವಾಡಿ ಕೇಂದ್ರದಲ್ಲಿ ದಾಖಲಾಗಿರುವ ಗರ್ಭಿಣಿ ಮತ್ತು ಬಾಣಂತರಿಯರಿಗೆ ಮಧ್ಯಾಹ್ನದ ಒಂದು ಸಂಪೂರ್ಣ ಬಿಸಿಯೂಟ ನೀಡುವ ಮಾತೃಪೂರ್ಣ ಯೋಜನೆ ಸ್ಥಗಿತವಿಲ್ಲ.

ಕೋವಿಡ್‍ನಿಂದಾಗಿ ಈ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ಬಿಸಿಯೂಟದ ಬದಲಾಗಿ ಅಕ್ಕಿ, ತೊಗರಿಬೇಳೆ, ಕಡ್ಲೆಬೀಜ, ಹೆಸರುಕಾಳು, ಹಾಲಿನಪುಡಿ, ಬೆಲ್ಲ, ಸಕ್ಕರೆ, ಮೊಟ್ಟೆ ಸೇರಿದಂತೆ ಆಹಾರ ಸಾಮಗ್ರಿಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಮಾತೃವಂದನಾ ಮತ್ತು ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ ಉದ್ದೇಶ ಒಂದೇ ಆಗಿರುವುದರಿಂದ ಮಾತೃಶ್ರೀ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.