ಉತ್ತಮ ಚಾಲನಾ ತರಬೇತಿಯಿಂದ ಅಪಘಾತ ಸಂಖ್ಯೆ ಇಳಿಮುಖ : ಡಿಸಿಎಂ ಸವದಿ

ಚಿತ್ರದುರ್ಗ,ಮಾ.22- ಚಾಲಕರಿಗೆ ಉತ್ತಮ ಚಾಲನಾ ತರಬೇತಿ ನೀಡುವುದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಎಂ.ಸವದಿ ಹೇಳಿದರು. ಹೊಳಲ್ಕೆರೆ ತಾಲ್ಲೂಕಿನ ಬಸಾಪುರ ಗೇಟ್ ಸಮೀಪ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಚಾಲಕರ ತರಬೇತಿ ಕೇಂದ್ರದ ಉದ್ಘಾಟನೆ ಹಾಗೂ ನೂತನ ಬಸ್ ಘಟಕದ ಶಂಕುಸ್ಥಾಪನಾ ಸಮಾರಂಭ ದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿವರ್ಷ 1.50 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ.

ಹಾಗಾಗಿ ಚಾಲಕರಿಗೆ ಉತ್ತಮ ತರಬೇತಿ ನೀಡಿದರೆ ಅಪಘಾತ ಸಂಖ್ಯೆ ಕಡಿಮೆಯಾಗಲು ಅನುಕೂಲ ವಾಗಲಿದೆ. ಚಾಲಕರ ತರಬೇತಿ ಕೇಂದ್ರಗಳನ್ನು ಬೆಂಗಳೂರು, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಮಾಡಲಾಗಿದೆ ಎಂದು ಹೇಳಿದರು. ಕೊರೊನಾದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬಹಳಷ್ಟು ತೊಂದರೆಯಾಯಿತು. ಅದರಲ್ಲೂ ವಿಶೇಷವಾಗಿ ಸಾರಿಗೆ ಇಲಾಖೆಗೆ ಹೆಚ್ಚಿನ ತೊಂದರೆಯಾಯಿತು. ಎರಡು ತಿಂಗಳು ಲಾಕ್‍ಡೌನ್ ಆಯಿತು. ಬಸ್ ಸಂಚಾರ ಸ್ಥಗಿತಕೊಂಡು ತೀವ್ರ ಸಂಕಷ್ಟ ಎದುರಿಸಬೇಕಾಯಿತು ಎಂದು ಹೇಳಿದರು.

ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ನಾಲ್ಕು ನಿಗಮಗಳಿದ್ದು, 1.30ಲಕ್ಷ ಸಿಬ್ಬಂದಿ ಇದ್ದಾರೆ. ಇಲಾಖೆ ವತಿಯಿಂದ ಒಂದು ವರ್ಷಕ್ಕೆ ನಾಲ್ಕು ಸಾವಿರ ಕೋಟಿ ಆದಾಯದ ನಿರೀಕ್ಷೆ ಇತ್ತು. ಇದು ಸಂಪೂರ್ಣ ನಿಂತು ಹೋಯಿತು. ಸುಮಾರು ಮೂರು ಸಾವಿರ ಕೋಟಿಯಷ್ಟು ಹಾನಿ ಅನುಭವಿಸಬೇಕಾಯಿತು. ಅಂತಹ ಸಂದರ್ಭದಲ್ಲಿ ಸಾರಿಗೆ ಸಿಬ್ಬಂದಿಯವರು ಆತಂಕಕ್ಕೆ ಒಳಗಾದರು.

ಆದರೆ ಸರ್ಕಾರದ ವತಿಯಿಂದ ರೂ.1900 ಕೋಟಿ ಹಣ ಪಡೆದು ಎಲ್ಲಾ ಸಿಬ್ಬಂದಿಗಳಿಗೆ ಒಂದು ರೂಪಾಯಿಯನ್ನು ಕಡಿತ ಮಾಡದಂತೆ ವೇತನ ಪಾವತಿಸಲಾಗಿದೆ. ಕೊರೊನಾ ನಂತರದ ದಿನಗಳಲ್ಲಿ ಇಲಾಖೆಗೆ ಬರುವಂತಹ ಆದಾಯವು ಇಂಧನ ಮತ್ತು ಸಂಬಂಳಕ್ಕೂ ಸರಿದೂಗುತ್ತಿಲ್ಲ ಎಂದು ತಿಳಿಸಿದರು. ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾದ 6ನೇ ವೇತನ ಆಯೋಗ vರಿಗೆ ಸರ್ಕಾರ ಸಿದ್ಧವಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಎಂ.ಸವದಿ ತಿಳಿಸಿದರು.

ಯಾವುದೇ ಕಾರಣಕ್ಕೂ ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆ ಸರ್ಕಾರದ ಆಲೋಚನೆಯಲ್ಲಿ ಇಲ್ಲ. 6ನೇ ವೇತನ ಪರಿಷ್ಕರಣೆ ಮಾಡಿ ಇನ್ನೂ ಕೆಲವೇ ದಿನಗಳಲ್ಲಿ ಜÁರಿಗೆ ತರುವ ನಿರ್ಣಯ ಹಂತದಲ್ಲಿದ್ದೇವೆ ಎಂದು ಹೇಳಿದರು. ಸಾರಿಗೆ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಾರಿಗೆ ನೌಕರರಿಗೆ ಭರವಸೆ ನೀಡಿದರು.

ಜಿ.ಪಂ. ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು ಮಾತನಾಡಿ, ಜಿಲ್ಲಾಯ ಜನರು ಚಾಲಕರ ತರಬೇತಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ಜಿಲ್ಲಾಯ ಇನ್ನೂ ಹಲವು ಕಡೆಗಳಲ್ಲಿ ಬಸ್ ಸಂಪರ್ಕ ಇಲ್ಲವಾಗಿದೆ. ಇಂತಹ ಕಡೆಗಳಲ್ಲಿ ಆದಷ್ಟು ತುರ್ತಾಗಿ ಬಸ್ ಸೇವೆ ಕಲ್ಪಿಸಿ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ವಿಜಯಕುಮಾರ್ ಮಾತನಾಡಿ, ಜಿಲ್ಲಾಯಲ್ಲಿ ವಿಭಾಗ ಪ್ರಾರಂಭವಾಗಿ ಸುಮಾರು ವರ್ಷವಾಗಿದೆ. ಸುಮಾರು 295 ವಾಹನಗಳಲ್ಲಿ 260 ವಾಹನಗಳು ಕಾರ್ಯಚರಣೆ ಮಾಡುತ್ತಿವೆ. ಸುಮಾರು 75 ಸಾವಿರ ಜನರಿಗೆ ಸಾರಿಗೆ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಐದು ವರ್ಷ ಅಪಘಾತ ಹಾಗೂ ಅಪರಾಧ ರಹಿತವಾಗಿ ಸೇವೆ ಸಲ್ಲಿಸಿರುವ ಚಾಲಕರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಬೆಳ್ಳಿ ಪದಕ ನೀಡಿ ಸನ್ಮಾನಿಸಿದರು.

ಜೊತೆಗೆ ಸುರಕ್ಷಾ ಚಾಲಕ ಎಂಬ ಬಿರುದು ನೀಡಲಾಯಿತು. ಜೊತೆಗೆ ಸಂಸ್ಥೆಯ ಗಂಡಬೇರುಂಡ ಲಾಂಛನವುಳ್ಳ 32 ಗ್ರಾಂ ತೂಕದ ಬೆಳ್ಳಿ ಪದಕ, ರೂ.2000 ನಗದು ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಅಲ್ಲದೇ ಮುಂಬರುವ ದಿನಗಳಲ್ಲಿ ಚಾಲಕರು ಅಪಘಾತವೆಸಗದಂತೆ ಕರ್ತವ್ಯ ನಿರ್ವಹಿಸಲು ಉತ್ತೇಜಿಸಲು ಮಾಸಿಕವಾಗಿ ರೂ.50 ಪ್ರೋತ್ಸಾಹ ನೀಡಲಾಗುತ್ತದೆ.

ಚನ್ನಗರಿಯಿಂದ ಬೆಂಗಳೂರಿಗೆ ಬಸ್ ಸಂಚಾರದ ನೂತನ ಮಾರ್ಗಕ್ಕೆ ಚಾಲನೆ ನೀಡಲಾಯಿತು. ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಧನಂಜನಾಯ್ಕ್, ಜಿ.ಪಂ. ಸದಸ್ಯರಾದ ಕೆ.ಸಿ. ಮಹೇಶ್ವರಪ್ಪ, ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮತ್ತಿತರರು ಉಪಸ್ಥಿತರಿದ್ದರು.