ರಾಜ್ಯದಲ್ಲಿ ಮತ್ತೆ ಉಪಮುಖ್ಯಮಂತ್ರಿ ಹುದ್ದೆಸೃಷ್ಟಿಯಾಗುವ ಸಾಧ್ಯತೆ..!

Spread the love

ಬೆಂಗಳೂರು,ಮಾ.14- ಒಂದು ವೇಳೆ ಯುಗಾದಿ ಹಬ್ಬದ ನಂತರ ಆಡಳಿತಾರೂಢ ಬಿಜೆಪಿಯಲ್ಲಿ ಸಚಿವ ಸಂಪುಟ ಪುನಾರಚನೆಯಾದರೆ ಮತ್ತೆ ನಾಲ್ಕು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ಹಾಲಿ ಸಚಿವರಾದ ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ ಹಾಗೂ ಮಾಜಿ ಸಚಿವ ಲಕ್ಷ್ಮಣ್ ಸವದಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿತ್ತು.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಉಪಮುಖ್ಯಮಂತ್ರಿ ಹುದ್ದೆಗಳನ್ನು ರದ್ದು ಪಡಿಸಲಾಗಿತ್ತು. ಇದೀಗ ಮುಂದಿನ ವರ್ಷ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ಜಾತಿ ಸಮೀಕರಣದ ಮೇಲೆ ಚುನಾವಣೆ ಎದುರಿಸಲು ಸಜ್ಜಾಗಿರುವ ಬಿಜೆಪಿ ನಾಲ್ಕು ಕಂದಾಯ ವಿಭಾಗಗಳಿಗೆ ಒಂದೊಂದು ಉಪಮುಖ್ಯಮಂತ್ರಿ ಹುದ್ದೆಗಳನ್ನು ನೀಡಲು ಚಿಂತನೆ ನಡೆಸಿದೆ.

ಏ.8ರ ನಂತರ ಸಚಿವ ಸಂಪುಟ ಪುನಾರಚನೆಯಾಗುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಪದೇ ಪದೇ ಅಧಿಕಾರವನ್ನು ಅನುಭವಿಸಿರುವ ಕೆಲವರಿಗೆ ಈ ಬಾರಿ ಸಂಪುಟದಿಂದ ಗೇಟ್ ಪಾಸ್ ನೀಡಲಾಗುವುದು ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿಬರುತ್ತಿದೆ. ಹಾಗೊಂದು ವೇಳೆ ಪುನಾರಚನೆಯಾದರೆ ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಭಾಗ , ಮಧ್ಯ ಕರ್ನಾಟಕ ಹಾಗೂ ಹಳೆ ಕರ್ನಾಟಕ ಭಾಗದಲ್ಲಿ ಪ್ರಮುಖರೊಬ್ಬರಿಗೆ ಡಿಸಿಎಂ ಸ್ಥಾನ ನೀಡುವ ಚಿಂತನೆ ಬಿಜೆಪಿಯಲ್ಲಿ ನಡೆದಿದೆ.

ಆದರೆ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಗುಟ್ಟನ್ನು ಬಿಜೆಪಿ ಮುಖಂಡರು ಬಿಟ್ಟುಕೊಡುತ್ತಿಲ್ಲ. ಸಂಪುಟ ಪುನಾರಚನೆಯಾದ ಸಂದರ್ಭದಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಸೂಚ್ಯವಾಗಿ ಹೇಳುತ್ತಿದ್ದಾರೆ. ಏ.8ರ ನಂತರವೇ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ದೆಹಲಿ ವರಿಷ್ಠರು ನನ್ನನ್ನು ಕರೆದರೆ ಯಾವಾಗ ಬೇಕಾದರೂ ಹೋಗುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಅಧಿವೇಶನ ಮುಗಿದು ಯುಗಾದಿ ಹಬ್ಬದ ನಂತರವೇ ಸಂಪುಟ ಪುನಾರಚನೆ ಪ್ರಕ್ರಿಯೆಗಳು ಪ್ರಾರಂಭವಾಗಲಿವೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ಒಂದು ವೇಳೆ ಸಂಪುಟದಲ್ಲಿ ಉಳಿದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ(ಕುರುಬ ಸಮುದಾಯ) ಸಂಪುಟಕ್ಕೆ ಸೇರ್ಪಡೆಯಾದರೆ ವಿಜಾಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(ಪಂಚಮಸಾಲಿ), ಪರಿಶಿಷ್ಟ ವರ್ಗದಿಂದ ಹಾಲಿ ಸಾರಿಗೆ ಸಚಿವ ಶ್ರೀರಾಮುಲು, ಪರಿಶಿಷ್ಟ ಜಾತಿಯಿಂದ ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಹುದ್ದೆ ಒಲಿದರೂ ಅಚ್ಚರಿಯಿಲ್ಲ.

ಹಿರಿಯರನ್ನು ಸಂಪುಟದಿಂದ ಕೈಬಿಡುವಂತೆ ವರಿಷ್ಠರು ಸೂಚನೆ ಕೊಟ್ಟರೆ, ಈಶ್ವರಪ್ಪ, ಕಾರಜೋಳ ಹೊರಗುಳಿಯಲಿದ್ದು, ಒಕ್ಕಲಿಗ ಸಮುದಾಯದ ಪ್ರಭಾವಿಗಳೊಬ್ಬರಿಗೆ ಡಿಸಿಎಂ ಹುದ್ದೆ ಸಿಗಬಹುದು ಎನ್ನಲಾಗುತ್ತಿದೆ. ಹಾಲಿ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವಧಿ ಶೀಘ್ರದಲ್ಲೇ ಮುಗಿಯಲಿದ್ದು, ತೆರವಾಗಲಿರುವ ಈ ಸ್ಥಾನಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಹೆಸರುಗಳು ಕೂಡ ತಿಳಿದುಬರಲಿದೆ.

ಸಿ.ಟಿ.ರವಿ ರಾಜ್ಯಾಧ್ಯಕ್ಷರಾದರೆ ಒಕ್ಕಲಿಗ ಸಮುದಾಯಕ್ಕೆ ಡಿಸಿಎಂ ಕೈ ತಪ್ಪಲಿದೆ. ಬೊಮ್ಮಾಯಿ ನಾಯಕತ್ವವೇನಾದರೂ ಬದಲಾದರೆ ಪುನಃ ಮತ್ತೆ ರಾಜಕೀಯ ಸಮೀಕರಣಗಳು ಏರುಪೇರಾಗಲಿವೆ.

ಅಂತಿಮವಾಗಿ ಏ.8ರ ನಂತರ ಸಂಪುಟ ರಚನೆ/ವಿಸ್ತರಣೆ ಪ್ರಕ್ರಿಯೆಗಳಿಗೆ ಚಾಲನೆ ದೊರಕಲಿದ್ದು, ಯುಗಾದಿ ಹಬ್ಬದ ಬೇವು ಬೆಲ್ಲ ಯಾರಿಗೆ ಧಕ್ಕಲಿದೆ ಎಂಬುದು ಕುತೂಲಹಕ್ಕೆ ಎಡೆ ಮಾಡಿಕೊಟ್ಟಿದೆ.

Facebook Comments