ಡಿಸಿಎಂ ಪುತ್ರನ ಕಾರಿಗೆ ರೈತ ಬಲಿ..!

ಅಮಿನ್‍ಘಡ,ಜು.6- ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಅವರ ಪುತ್ರ ಪ್ರಯಾಣಿಸುತ್ತಿದ್ದ ಕಾರು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ರೈತ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ಬೈಕ್ ಸವಾರ ಕೂಡ್ಲಪ್ಪ ಮೃತಪಟ್ಟ ರೈತ. ಬಾಗಲಕೋಟೆ ಜಿಲ್ಲೆ ಕೂಡಲಸಂಗ್ರಮ ಕ್ರಾಸ್ ಬಳಿ ಚಿತ್ರದುರ್ಗ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಲಕ್ಷ್ಮಣಸವದಿ ಅವರ ಪುತ್ರ ಚಿದಾನಂದ ಸವದಿ ಅವರು ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದರೆನ್ನಲಾದ ಕಾರು ಕೂಡ್ಲಪ್ಪ ಅವರಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಕೂಡ್ಲಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಲಕ್ಷ್ಮಣಸವದಿ ಅವರ ಹಿರಿಯ ಮಗ ಚಿದಾನಂದ ಸವದಿ ಸೇರಿದಂತೆ 12 ಮಂದಿ ಎರಡು ಕಾರಿನಲ್ಲಿ ಪ್ರವಾಸಕ್ಕೆ ತೆರಳಿದ್ದು, ಈ ವೇಳೆ ಘಟನೆ ಸಂಭವಿಸಿದ್ದು, ಅಪಘಾತದ ನಂತರ ತಮ್ಮ ವಾಹನದ ನಂಬರ್ ಜಖಂಗೊಳಿಸಿ ಲಕ್ಷ್ಮಣಸವದಿ ಪುತ್ರ ಮತ್ತೊಂದು ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.