ರಕ್ತದ ಮಡುವಿನಲ್ಲಿ ಯುವಕನ ಶವ ಪತ್ತೆ

ಬೆಂಗಳೂರು,ಏ.21- ರಕ್ತದ ಮಡುವಿನಲ್ಲಿ ಯುವಕನ ಶವ ಪತ್ತೆಯಾಗಿದ್ದು, ಕೊಲೆಯೋ ಅಥವಾ ಆಕಸ್ಮಿಕವಾಗಿ ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಮಾಗಡಿ ರಸ್ತೆ, 5ನೇ ಕ್ರಾಸ್ ನಿವಾಸಿ ಉಮೇಶ್ (24) ಮೃತಪಟ್ಟಿರುವ ಯುವಕ. ಗೂಡ್ಸ್ ವಾಹನದ ಚಾಲನಾ ವೃತ್ತಿ ಮಾಡುತ್ತಿದ್ದ ಉಮೇಶ್‍ಗೆ ಕುಡಿತದ ಚಟ ಇತ್ತು ಎಂದು ಗೋವಿಂದರಾಜನಗರ ಠಾಣೆ ಪೊಲೀಸರು `ಈ ಸಂಜೆ’ಗೆ ತಿಳಿಸಿದ್ದಾರೆ.

ನಿನ್ನೆ ರಾತ್ರಿ ಕಲ್ಯಾಣಮಂಟಪಕ್ಕೆ ಹೋಗಿ ಮದುವೆ ಸಮಾರಂಭ ದಲ್ಲಿ ಉಮೇಶ್ ಪಾಲ್ಗೊಂಡಿದ್ದ. ರಾತ್ರಿ 11.30ರಲ್ಲಿ ತಂದೆ ಮೊಬೈಲ್‍ಗೆ ಕರೆ ಮಾಡಿದಾಗ ಮನೆಗೆ ಬರುತ್ತಿರುವುದಾಗಿ ಹೇಳಿದ್ದಾನೆ. 12.30ರಲ್ಲಿ ಸ್ನೇಹಿತರು ಕರೆ ಮಾಡಿದ್ದಾರೆ. ತದನಂತರದಲ್ಲಿ ಏನಾಯಿತೋ ಗೊತ್ತಿಲ್ಲ.

ಬೆಳಗಾಗುವಷ್ಟರಲ್ಲಿ ಆತನ ಶವ ವೀರೇಶ್ ಚಿತ್ರ ಮಂದಿರ ಸಮೀಪದ ಲಕ್ಷ್ಮೀ ಆಟೋಮೊಬೈಲ್ ಅಂಗಡಿ ಮುಂಭಾಗ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಇಂದು ಮುಂಜಾನೆ ನೋಡಿದ ಸಾರ್ವಜನಿಕರು ಗೋವಿಂದ ರಾಜನಗರ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದು ಕೊಲೆಯೋ ಅಥವಾ ಆಕಸ್ಮಿಕವಾಗಿ ಬಿದ್ದು, ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಿಂದಷ್ಟೇ ನಿಜಾಂಶ ಬೆಳಕಿಗೆ ಬರಲಿದೆ.
ಪ್ರಕರಣ ದಾಖಲಿಸಿ ಕೊಂಡಿರುವ ಗೋವಿಂದ ರಾಜನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.