ಸಿಎಂಗೆ ಸಂಕ್ರಾಂತಿ ಡೆಡ್ ಲೈನ್ ನೀಡಿದ ವಲಸೆ ಶಾಸಕರು..!

ಬೆಂಗಳೂರು,ಡಿ.27-ಕಾಂಗ್ರೆಸ್‍ನಿಂದ ಬಂದು ಸಚಿವ ಸ್ಥಾನ ಸಿಗದೆ ಬೇಸರಗೊಂಡಿರುವ ಕೆಲವು ಶಾಸಕರು ಸಂಕ್ರಾಂತಿಯೊಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒತ್ತಡ ಹಾಕಿದ್ದಾರೆ. ಒಂದು ವೇಳೆ ಪುನಃ ದೆಹಲಿ ವರಿಷ್ಠರ ಕಡೆ ಕೈ ತೋರಿಸಿ ಮುಂದೂಡುವ ಪ್ರಯತ್ನ ಮಾಡಿದರೆ ನಮ್ಮ ನಿಲುವನ್ನು ಪ್ರಕಟಿಸಬೇಕಾಗುತ್ತದೆ ಎಂದು ಅಸಮಾಧಾನಿತ ಶಾಸಕರು ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ವಿಧಾನ ಪರಿಷತ್‍ನ ಸದಸ್ಯರಾದ ಎಂಟಿಬಿ ನಾಗರಾಜ್, ಆರ್.ಶಂಕರ್, ಎಚ್.ವಿಶ್ವನಾಥ್ ಹಾಗೂ ಶಾಸಕ ಮುನಿರತ್ನ ಅವರು ಸಂಕ್ರಾಂತಿಯ ನಂತರ ತೀರ್ಮಾನಿಸದಿದ್ದರೆ ನಮ್ಮ ಮೌನವನ್ನು ಮುರಿಯಬೇಕಾಗುತ್ತದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಹೀಗಾಗಿಯೇ ಕಳೆದ ಹಲವು ದಿನಗಳಿಂದ ಸಚಿವ ಸ್ಥಾನದ ಆಕಾಂಕ್ಷಿಗಳು ಮುಖ್ಯಮಂತ್ರಿ ಅಕೃತ ನಿವಾಸ ಕಾವೇರಿಯತ್ತ ಮುಖವನ್ನೂ ಕೂಡ ಹಾಕುತ್ತಿಲ್ಲ.ಅದರಲ್ಲೂ ಸರ್ಕಾರದ ವಿರುದ್ಧ ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡಿ ಮುಜುಗರಕ್ಕೆ ಸಿಲುಕಿಸುವ ಮೈಸೂರು ಭಾಗದ ವಿಧಾನಪರಿಷತ್ ಸದಸ್ಯರೊಬ್ಬರು ಯಾವುದೇ ಕಾರಣಕ್ಕೂ ನಾನು ಇನ್ನು ಮುಂದೆ ಯಡಿಯೂರಪ್ಪನವರ ನಿವಾಸದತ್ತ ತಲೆಯನ್ನೇ ಹಾಕುವುದಿಲ್ಲ ಎಂದು ಶಪಥವನ್ನು ಮಾಡಿದ್ದಾರೆ.

ಒಂದು ಮಂತ್ರಿ ಸ್ಥಾನಕ್ಕಾಗಿ ನನ್ನ ಸ್ವಾಭಿಮಾನ ಬಿಟ್ಟು ಲಾಭಿ ನಡೆಸುವುದಿಲ್ಲ. ನನ್ನ ಹಿರಿತನವನ್ನು ಪರಿಗಣಿಸಿ ಸಚಿವ ಸ್ಥಾನ ಕೊಟ್ಟರೆ ಕೊಡಿ ಇಲ್ಲದಿದ್ದರೆ ನೀವು ಬೇಡ, ನಿಮ್ಮ ಸಹವಾಸವೂ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಅದರಲ್ಲೂ ಸಚಿವ ಸ್ಥಾನ ತ್ಯಾಗ ಮಾಡಿ ಬಿಜೆಪಿಗೆ ಬಂದಿದ್ದ ಎಂಟಿಬಿ ನಾಗರಾಜ್, ಆರ್.ಶಂಕರ್, ಇತ್ತೀಚೆಗೆ ಆರ್‍ಆರ್‍ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದಿದ್ದ ಮುನಿರತ್ನ ಮತ್ತಿತರರು ಸಿಎಂ ನಡವಳಿಕೆಗೆ ಅಸಮಾಧಾನ ಹೊರಹಾಕಿದ್ದಾರೆ.

ಸಂಕ್ರಾಂತಿ ಒಳಗೆ ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ನೀವು ಯಾವುದಾದರೊಂದು ತೀರ್ಮಾನವನ್ನು ಕೈಗೊಳ್ಳಬೇಕು. ಪ್ರತಿಯೊಂದಕ್ಕೆ ವರಿಷ್ಠರತ್ತ ಕೈ ತೋರಿಸುವುದನ್ನು ಬಿಟ್ಟುಬಿಡಿ. ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಸೇರಿದಂತೆ ಯಾವುದೇ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಯವರು ಸ್ವತಂತ್ರರೆಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಹೇಳಿದ್ದರೂ ನೀವು ಏಕೆ ವಿಳಂಬ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ವಿಧಾನಪರಿಷತ್ ಸದಸ್ಯರಾಗಿ ಹಲವು ತಿಂಗಳಾದರೂ ಸಂಪುಟ ವಿಸ್ತರಣೆ ಮಾಡಲು ಏಕೆ ವಿಳಂಬವಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ನಮ್ಮ ಹಿತೈಷಿಗಳಿಗೂ ಹೇಳಿ ಹೇಳಿ ಸಾಕಾಗಿ ಹೋಗಿದೆ. ಪಕ್ಷದ ಆಂತರಿಕ ವಿದ್ಯಮಾನಗಳು ಏನೇ ಇದ್ದರೂ ಕೂಡಲೇ ಸಂಪುಟ ವಿಸ್ತರಣೆಗೆ ಸಮಯ ನಿಗದಿ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.

ಉಪಚುನಾವಣೆ ಮುಗಿದ ಬಳಿಕ ಸಂಪುಟ ವಿಸ್ತರಣೆ ಮಾಡಲು ನೀವೇ ದೆಹಲಿಗೆ ಹೋಗಿಬಂದಿದ್ದೀರಿ. ಈಗ ಫಲಿತಾಂಶ ಪ್ರಕಟಗೊಂಡು ತಿಂಗಳೇ ಕಳೆದರೂ ಮತ್ತೆ ಕುಂಟು ನೆಪಗಳನ್ನು ಹೇಳುತ್ತಾ ಮುಂದೂಡುವ ಪ್ರಯತ್ನ ಮಾಡುತ್ತಿದ್ದೀರಿ ತಕ್ಷಣವೇ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಇನ್ನು ಮುಂದೆ ಯಾವುದೇ ಕಾರಣಗಳನ್ನು ಕೇಳುವ ಸ್ಥಿತಿಯಲ್ಲಿ ನಾವಿಲ್ಲ ಎಂದು ನೋವು ಹೊರಹಾಕಿದ್ದಾರೆ.

ಶಿರಾ ಮತ್ತು ಆರ್‍ಆರ್‍ನಗರ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಬಹಿರಂಗ ಪ್ರಚಾರದಲ್ಲೂ ಸಿಎಂ ಅವರೇ ಹೇಳಿದ್ದರು. ಆದರೆ ತಿಂಗಳು ಕಳೆಯುತ್ತಾ ಬಂದರೂ ಅದರ ಬಗ್ಗೆ ಮಾತನಾಡುತ್ತಿಲ್ಲ.

ಎಲ್ಲದಕ್ಕೂ ದೆಹಲಿ ನಾಯಕರತ್ತ ಬೊಟ್ಟು ಮಾಡುವುದು ಸರಿಯಲ್ಲ. ಸಂಪುಟ ವಿಸ್ತರಣೆ ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ತಕ್ಷಣವೇ ವರಿಷ್ಠರನ್ನು ಭೇಟಿಯಾಗಿ ಇಲ್ಲಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಎಂದು ಒತ್ತಡ ಹಾಕಿದ್ದಾರೆ.

ಇದೀಗ ಶಾಸಕರು ಡೆಡ್‍ಲೈನ್ ಕೊಡುತ್ತಿರುವುದರಿಂದ ಸ್ವತಃ ಯಡಿಯೂರಪ್ಪನವರೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಂದೆಡೆ ನಾಯಕತ್ವ ಬದಲಾವಣೆ ಕೂಗು, ಸಂಪುಟ ವಿಸ್ತರಣೆ, ಪುನಾರಚನೆ, ತಮ್ಮ ವಿರುದ್ಧ ಕೆಲವರು ಬಹಿರಂಗವಾಗಿ ಹೇಳಿಕೆ ಕೊಡುತ್ತಿರುವುದು ಸೇರಿದಂತೆ ಕೆಲವು ಬೆಳವಣಿಗೆಗಳಿಂದಾಗಿ ಬಿಎಸ್‍ವೈ ಅವರು ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

Sri Raghav

Admin