“ಚುನಾವಣೆಗಾಗಿ ಬೊಮ್ಮಾಯಿ ಮನಸೋಇಚ್ಚೆ ಬಜೆಟ್ ಮಂಡನೆ”

Social Share

ಬೆಂಗಳೂರು,ಫೆ.24- ಚುನಾವಣೆಯ ಕಾರಣಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನಸೋ ಇಚ್ಚೆ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಸದಸ್ಯ ಮರಿಸಿದ್ದೇಗೌಡ ಟೀಕಿಸಿದರು. ವಿಧಾನಪರಿಷತ್‍ನಲ್ಲಿ ವಿತ್ತೀಯ ಕಲಾಪದ ಮೇಲೆ ಚರ್ಚೆಯಲ್ಲಿ ಭಾಗವಹಿಸಿದ ಅವರು, ರಾಜ್ಯ ಸರ್ಕಾರ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಬ್ಯಾಕ್‍ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಚರ್ಚೆ ಮುಂದುವರೆಸಿದ ಮರಿಸಿದ್ದೇಗೌಡ ಅವರು, ವಿಶ್ವವಿದ್ಯಾನಿಲಯಗಳಿಗೆ ಅನುದಾನ ನೀಡುವ ಪದ್ದತಿಯನ್ನು ಸರ್ಕಾರ ಸ್ಥಗಿತ ಮಾಡಿದೆ. ಬದಲಾಗಿ ವಿದ್ಯಾರ್ಥಿಗಳ ಶುಲ್ಕದಿಂದಲೇ ವಿವಿಗಳನ್ನು ಮುನ್ನಡೆಸುವಂತೆ ಸಲಹೆ ನೀಡಲಾಗಿದೆ.

ಇದರಿಂದಾಗಿ ಪ್ರತಿ ವಿಶ್ವವಿದ್ಯಾಲಯಗಳು ವಾರ್ಷಿಕ ಶೇ.10ರಷ್ಟು ಶುಲ್ಕ ಹೆಚ್ಚಿಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಕೂಡ ಸರ್ಕಾರಿ ವಿವಿಯಲ್ಲೂ ಓದಲು ಕಷ್ಟವಾಗುತ್ತಿದೆ. ಇನ್ನು ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಶುಲ್ಕವನ್ನು ವಿದ್ಯಾರ್ಥಿಗಳ ಖಾತೆಗೆ ಪಾವತಿಸಲಾಗುತ್ತಿದೆ. ಇತ್ತ ವಿವಿಗಳಿಗೆ ಅನುದಾನವಿಲ್ಲ. ಸರ್ಕಾರದಿಂದ ಶುಲ್ಕ ಪಡೆದ ವಿದ್ಯಾರ್ಥಿಗಳು ಅವುಗಳನ್ನು ವಿವಿಗೆ ಪಾವತಿಸುವುದಿಲ್ಲ. ಹೀಗಾಗಿ ವಿವಿಗಳ ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಆಕ್ಷೇಪಿಸಿದರು.

ರಾಜ್ಯದಲ್ಲಿರುವ 114 ಕನ್ನಡ ಮಾಧ್ಯಮ ಶಾಲೆಗಳಿಗೆ ಸರ್ಕಾರ ಪ್ರಸಕ್ತ ವರ್ಷದಲ್ಲೇ ಅನುದಾನ ನೀಡಬೇಕು ಎಂದು ಸದಸ್ಯರು ಪಟ್ಟು ಹಿಡಿದರು.ಅನುದಾನಕ್ಕಾಗಿ ಸದರಿ ಶಾಲೆಗಳ ಶಿಕ್ಷಕರು ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅದರಲ್ಲಿ ಒಬ್ಬರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತಷ್ಟು ಸಾವುಗಳಿಗೆ ಅವಕಾಶ ಮಾಡಿಕೊಡದೆ ಅನುದಾನ ಮಂಜೂರು ಮಾಡಿ ಎಂದು ಒತ್ತಾಯಿಸಿದರು.

ಯೋಗ ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಪ್ರಾಥಮಿಕ ಹಂತದಿಂದಲೇ ಸೈಕಲ್‍ಗಳನ್ನು ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.

#DebateonBudget, #VidhanaParishat, #Marisiddegowda,

Articles You Might Like

Share This Article