ಶ್ರೀಲಂಕಾ ಸಂಸತ್‍ಗೆ ಪರಮಾಧಿಕಾರ ಕಾಯ್ದೆ ತಿದ್ದುಪಡಿಗೆ ವಿರೋಧ

Social Share

ಕೊಲೊಂಬೋ, ಅ.4- ಆರ್ಥಿಕವಾಗಿ ಜರ್ಝರಿತವಾಗಿರುವ ಶ್ರೀಲಂಕದಲ್ಲಿ ಸಿಟ್ಟಿಗೆದ್ದ ಪ್ರತಿಭಟನಾಕಾರರ ಬೇಡಿಕೆಯಂತೆ ಸಂವಿಧಾನದ ಕಲಂ 22ಕ್ಕೆ ತಿದ್ದುಪಡಿ ತರುವ ಮಸೂದೆಯ ಮೇಲಿನ ಚರ್ಚೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.

ಆಡಳಿತ ಪಕ್ಷ ಶ್ರೀಲಂಕಾ ಪೊಡುಜನ ಪೆರಮುನ (ಎಸ್‍ಎಲ್‍ಪಿಪಿ) ಸಂಸದರ ವಿರೋಧದಿಂದಾಗಿ ಮಹತ್ವದ ಮಸೂದೆ ಮತ್ತೆ ನೆನೆಗುದಿಗೆ ಬೀಳುವ ಸಾಧ್ಯತೆ ಇದೆ. ಕಲಂ 22 ದೇಶದ ಅಧ್ಯಕ್ಷರ ಬದಲಿಗೆ ದೇಶದ ಸಂಸತ್‍ಗೆ ಸಂಪೂರ್ಣ ಪರಮಾಧಿಕಾರ ನೀಡುವುದಾಗಿದೆ. ಅಕ್ಟೋಬರ್ 6 ಮತ್ತು 7ರಂದು ಈ ವಿಧೇಯಕದ ಮೇಲಿನ ಚರ್ಚೆಗೆ ಸಮಯ ನಿಗದಿಯಾಗಿತ್ತು. ಆದರೆ ಸಂಸತ್‍ನಲ್ಲಿ ಚರ್ಚೆಯಾಗುವ ಸಾಧ್ಯತೆಗಳು ಕ್ಷೀಣವಾಗಿವೆ ಎಂದು ಆಡಳಿತ ಪಕ್ಷದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಈ ಮೊದಲು ಅಧ್ಯಕ್ಷರಾಗಿದ್ದ ಗೋಟಬಯ ರಾಜಪಕ್ಷೆ 2020ರಲ್ಲಿ ಸಂವಿಧಾನದ ಕಲಂ 20ಎಗೆ ತಿದ್ದುಪಡಿ ತಂದು ಶ್ರೀಲಂಕಾದ ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರಗಳನ್ನು ಕಲ್ಪಿಸಿದ್ದರು. ಆದರ ನಂತರ ದುರಾಡಳಿತದಿಂದಾಗಿ ಶ್ರೀಲಂಕಾದಲ್ಲಿ ಸಾಕಷ್ಟು ಅವಗಡಗಳು ಸಂಭವಿಸಿದ್ದವು. ಶ್ರೀಲಂಕಾ ಭಾರೀ ಪ್ರಮಾಣದ ಆರ್ಥಿಕ ಹಿಂಜರಿತವನ್ನು ಅನುಭವಿಸಿತ್ತು. ಜೀವನಾವಶ್ಯಕ ವಸ್ತುಗಳಿಗಾಗಿ ವಾರಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾದಾಗ ಜನ ರೋಚ್ಚಿಗೆದ್ದು ಬೀದಿಗಿಳಿದರು. ದಂಗೆಯ ವಾತಾವರಣ ನಿರ್ಮಾಣವಾಯಿತು. ಅಧ್ಯಕ್ಷ ಗೋಟಬಯ ರಾಜಪಕ್ಷೆ , ಪ್ರಧಾನಿ ಸೇರಿದಂತೆ ಹಲವರನ್ನು ಬದಲಾವಣೆ ಮಾಡಿದರು.

ಸರ್ವಪಕ್ಷಗಳ ಸರ್ಕಾರ ರಚನೆ ಮಾಡುವ ಪ್ರಯತ್ನ ನಡೆಸಿದರು. ಆದರೂ ಜನರ ಕೋಪ ತಣಿಯಲಿಲ್ಲ, ಅಧ್ಯಕ್ಷರು ಮತ್ತು ಪ್ರಧಾನಿ ಕಚೇರಿಗೆ ನುಗ್ಗಿದರು. ಅಧ್ಯಕ್ಷರು ದೇಶ ಬಿಟ್ಟು ಪರಾರಿಯಾದರು. ಪ್ರಧಾನಿ ಭೂಗತರಾಗಿ ತಲೆ ಮರೆಸಿಕೊಂಡದರು. ಕೊನೆಗೆ ಪ್ರಧಾನಿಯಾಗಿದ್ದ ರಣೀಲ ವಿಕ್ರಮ ಸಿಂಘೆ ಅಧ್ಯಕ್ಷರಾಗಿ ಸಂಸತ್‍ನಲ್ಲಿ ಚುನಾಯಿತರಾದರು. ಪ್ರತಿಭಟನೆ ನಡೆಸಿದ ಜನ ಸಂವಿಧಾನದ 22ನೆ ತಿದ್ದುಪಡಿ ರೂಪಿಸುವಂತೆ ಒತ್ತಾಯಿಸಿದರು.

ಅದರ ಪ್ರಕಾರ ರೂಪಿಸಲಾದ ತಿದ್ದುಪಡಿ ಕರಡು ವಿಧೇಯಕಕ್ಕೆ ಕಳೆದ ಆಗಸ್ಟ್ ತಿಂಗಳಿನಲ್ಲಿ ನಡೆದ ಸಂಪುಟ ಸಭೆಯಲ್ಲಿ ಅಂಗೀಕಾರಗೊಂಡಿದೆ. 225 ಸಂಸದರಿರುವ ಸಂಸತ್‍ನಲ್ಲಿ ಚರ್ಚೆಯಾಗಿ ಮೂರನೇ ಎರಡರಷ್ಟು ಸಂಖ್ಯಾಬಲದಲ್ಲಿ ವಿಧೇಯಕ ಅಂಗೀಕಾರಗೊಂಡು ಕಾಯ್ದೆಯಾಗಿಬೇಕಿತ್ತು. ಆದರೆ ಆಡಳಿತಾರೂಢ ಪಕ್ಷದಲ್ಲಿ ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಮೊದಲು 19ಎ ವಿಯಲ್ಲಿದ್ದಂತೆ 22ನೆ ತಿದ್ದುಪಡಿ ಸಂಸತ್‍ಗೆ ಹೆಚ್ಚಿನ ಅಕಾರ ನೀಡಲಿದೆ. ಜೊತೆಗೆ ಭ್ರಷ್ಟಚಾರದ ವಿರುದ್ಧ ಕ್ರಮಕ್ಕೂ ಅವಕಾಶ ಕಲ್ಪಿಸಿದೆ. ಗೋಟಬಯ ತಮ್ಮ ಅನುಕೂಲಕ್ಕಾಗಿ ರೂಪಿಸಿಕೊಂಡಿದ್ದ 20ಎ ವಿಯನ್ನು ದುರ್ಬಲಗೊಳಿಸಲಿದೆ. ಆದರೆ ಈ ಚರ್ಚೆಗೆ ಆಡಳಿತ ಪಕ್ಷದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

Articles You Might Like

Share This Article