ಪಣಜಿ, ಜ.17- ಕಾಂಗ್ರೆಸ್ ಪಕ್ಷದಿಂದ ಹೊರನಡೆದು, ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ವಾರಗಳ ನಂತರ, ಯಾವುದೇ ಕಾರಣ ನೀಡದೆ ಗೋವಾದ ಕಾಂಗ್ರೆಸ್‌ನ ಮಾಜಿ ಕಾರ್ಯಾಧ್ಯಕ್ಷ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಸೋಮವಾರ ತಮ್ಮ ಮಾತೃಪಕ್ಷಕ್ಕೆ ಮರುಸೇರ್ಪಡೆಯಾಗುವ ಸುಳಿವು ನೀಡಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ಸೇರುವ “ತಪ್ಪು” ಎಸಗಿದ್ದಕ್ಕಾಗಿ ಅವರು ತಮ್ಮ ಬೆಂಬಲಿಗರು ಮತ್ತು ಹಿತೈಷಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.
ಸೋಮವಾರ ಪಣಜಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲೌರೆಂಕೊ, ಟಿಎಂಸಿಗೆ ಸೇರಲು ನಿರ್ಧರಿಸಿದ ನಂತರ ತೀವ್ರ ಹಿನ್ನಡೆಯನ್ನು ಎದುರಿಸಬೇಕಾಯಿತು ಎಂದಿದ್ದಾರೆ. ಟಿಎಂಸಿಗೆ ಸೇರುವುದರಿಂದ ಮತಗಳನ್ನು ವಿಭಜಿಸುವ “ಹೊರಗಿನ ಪಕ್ಷ” ವನ್ನು ಗೋವಾಕ್ಕೆ ಆಹ್ವಾನಿಸಿದಂತಾಗುತ್ತದೆ ಎಂದು ಅವರ ಬೆಂಬಲಿಗರು ಆತಂಕ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿದ್ದ ಲೊರೆಂಕೊ ಕಳೆದ ಡಿಸೆಂಬರ್‌ನಲ್ಲಿ ಟಿಎಂಸಿ ಸೇರಲು ಕರ್ಟೋರಿಮ್‌ನ ಶಾಸಕ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಭಾನುವಾರ, ಅವರು ಟಿಎಂಸಿ ತೊರೆಯುವ ನಿರ್ಧಾರದ ಬಗ್ಗೆ ಬ್ಯಾನರ್ಜಿ ಅವರಿಗೆ ಕಳುಹಿಸಿದ ಪತ್ರದಲ್ಲಿ ಯಾವುದೇ ಕಾರಣವನ್ನು ನೀಡದೆ ಟಿಎಂಸಿಗೆ ರಾಜೀನಾಮೆ ನೀಡಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರುವ ನಿರ್ಧಾರವು ತಪ್ಪು ಮಾಡಿದ್ದಾಗಿದೆ. ಈಗ ಜನರು ನಂಬುವ ಅದೇ ವ್ಯಕ್ತಿಯಾಗಲು ನಾನು ಬಯಸುವುದಾಗಿ ತಿಳಿಸಿದ್ದಾರೆ.
ನಾನು ಜನರಿಗಾಗಿ ಹೋರಾಡಿದ್ದೇನೆ. ಅವರ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೆ. ನಾನು ಹೃದಯ ಮತ್ತು ಮನಸ್ಸಿನಿಂದ ಜನರಿಗಾಗಿ ಕೆಲಸ ಮಾಡಿದ್ದೇನೆ. ಮರಳಿ ಕಾಂಗ್ರೆಸ್ ಗೆ ಸೇರುವಂತೆ ಬೆಂಬಲಿಗರು ತಮ್ಮನ್ನು ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ಮೈಕೆಲ್ ಲೋಬೋ ಅವರು ನನ್ನನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದಾರೆ. ನನ್ನ ಜನರು ಹೇಳುವುದನ್ನು ನಾನು ಕೇಳುತ್ತೇನೆ, ಎಂದು ಅವರು ಹೇಳಿದರು.
