ಬಿಬಿಎಂಪಿ ಚುನಾವಣೆಯಲ್ಲಿ ದೆಹಲಿ ಮಾದರಿ ಜಾರಿಗೆ ಮುಂದಾದ ಬಿಜೆಪಿ

Social Share

ಬೆಂಗಳೂರು,ಜ.31-ಶತಾಯ ಗತಾಯ ಈ ಬಾರಿ ಬಿಬಿಎಂಪಿಯಲ್ಲಿ ಗೆದ್ದು ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಮುಂದಾಗಿದೆ. ಈಗಾಗಲೇ ಒಂದು ಬಾರಿ ಮೇಯರ್, ಉಪಮೇಯರ್, ಸತತ ಮೂರು ಬಾರಿ ಗೆದ್ದವರು, ಸ್ಥಾಯಿ ಸಮಿತಿ ಅಧ್ಯಕ್ಷರಾದವರು ಹಾಗೂ ಪದೇ ಪದೇ ಅಕಾರ ಅನುಭವಿಸಿದವರಿಗೆ ಗೇಟ್ ಪಾಸ್ ನೀಡಲು ತೀರ್ಮಾನಿಸಿದೆ.
ಪಕ್ಷಕ್ಕೆ ದುಡಿದವರು, ಯುವ ಮುಖಗಳು, ಮತದಾರರ ಜೊತೆ ಉತ್ತಮ ಸಂಪರ್ಕ ಹೊಂದಿದವರು, ಸಚ್ಚಾರಿತ್ರತೆ, ಉತ್ತಮ ಶಿಕ್ಷಣ, ಸಾಮಾಜಿಕ ಹಿನ್ನೆಲೆ, ಬದ್ದತೆ, ಆರ್‍ಎಸ್‍ಎಸ್ ಮತ್ತು ಸಂಘ ಪರಿವಾರದ ಹಿನ್ನೆಲೆ ಸೇರಿದಂತೆ ಉತ್ತಮರನ್ನೇ ಅಭ್ಯರ್ಥಿ ಮಾಡಲು ಚಿಂತನೆ ನಡೆದಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷದ ಕಚೇರಿಯಲ್ಲಿ ಬೆಂಗಳೂರು ಪ್ರತಿನಿಸುವ ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖರ ಜೊತೆ ನಡೆಸಿದ ಸಭೆಯಲ್ಲಿ ಹಳೆ ಮುಖಗಳ ಬದಲಿಗೆ ಹೊಸಬರನ್ನೇ ಆಯ್ಕೆ ಮಾಡಬೇಕೆಂಬ ಅಭಿಪ್ರಾಯ ಕೇಳಿಬಂದಿದೆ.
ಪ್ರತಿ ಚುನಾವಣೆಯಲ್ಲಿ ಹಣವಂತರು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರು, ಸಚಿವರು ಇಲ್ಲವೇ ಶಾಸಕರ ಹಿಂಬಾಲಕರು, ಪ್ರಭಾವಿಗಳೇ ಕಣಕ್ಕಿಳಿದು ಗೆದ್ದು ಬರುತ್ತಿದ್ದರು. ಇದರಿಂದಾಗಿ ಮೂಲ ಕಾರ್ಯಕರ್ತರ ಅಸಮಾಧಾನ ಸರ್ವೇ ಸಾಮಾನ್ಯವಾಗಿತ್ತು.
ಅಲ್ಲದೆ ಪಕ್ಷಕ್ಕಾಗಲಿ ಇಲ್ಲವೇ ಬಿಬಿಎಂಪಿಗೆ ಇವರಿಂದ ಹೇಳಿಕೊಳ್ಳುವಂತಹ ಹೆಸರು ಕೂಡ ಬರುತ್ತಿರಲಿಲ್ಲ. ಸ್ವಯಂ ಅಭಿವೃದ್ಧಿ ಹಾಗೂ ಕ್ಷೇತ್ರವನ್ನು ಗಟ್ಟಿ ಮಾಡಿಕೊಂಡು ತಮ್ಮ ಅಕಾರ ಅವ ಮುಗಿದ ನಂತರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿಯುತ್ತಿದ್ದರು.
ಜೊತೆಗೆ ಸಿಂಡಿಕೇಟ್ ರಚಿಸಿಕೊಂಡಿರುವ ಬೆಂಗಳೂರು ಪ್ರತಿನಿಸುವ ಹಲವಾರು ಸಚಿವರು ಮತ್ತು ಶಾಸಕರು ಪ್ರತಿ ಚುನಾವಣೆಯಲ್ಲಿ ತಮ್ಮ ಹಿಂಬಾಲಕರಿಗೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಾರ್ಡ್‍ಗಳಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಡುತ್ತಿದ್ದರು.
ಇದಕ್ಕೆ ತಿಲಾಂಜಲಿ ಹಾಡಲು ಮುಂದಾಗಿರುವ ಬಿಜೆಪಿ, ಈ ಬಾರಿಯ ಚುನಾವಣೆಯಲ್ಲಿ ಪಕ್ಷ ನಿಷ್ಠರು, ವಿದ್ಯಾವಂತರು, ಸಮಾಜ, ರಾಜ್ಯ, ದೇಶದ ಬಗ್ಗೆ ಕಳಕಳಿ ಹೊಂದಿರುವವರು, ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಆರೋಪ ಹೊಂದಿರದವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
# ಯಶಸ್ವಿಯಾದ ದೆಹಲಿ ಪ್ರಯೋಗ:
ಈ ಹಿಂದೆ ದೇಶದ ರಾಜಧಾನಿ ನವದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಹಾಲಿ ಸದಸ್ಯರ ಮೇಲೆ ಅನೇಕ ಗುರುತರವಾದ ಆರೋಪಗಳು ಕೇಳಿಬಂದಿದ್ದವು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ರಿಯಲ್ ಎಸ್ಟೇಟ್ ವ್ಯವಹಾರ ಮುಂತಾದ ಆರೋಪಗಳಿಂದ ಪಕ್ಷ ಮುಜುಗರಕ್ಕೆ ಸಿಲುಕಿತ್ತು.  ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ ವರಿಷ್ಠರು, ಸುಮಾರು 200ಕ್ಕೂ ಹೆಚ್ಚು ಹಾಲಿ ಸದಸ್ಯರಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖಗಳನ್ನು ಕಣಕ್ಕಿಳಿಸಿದರು.
ಪರಿಣಾಮ ಆಮ್ ಆದ್ಮಿಯ ಅಬ್ಬರದ ನಡುವೆಯೂ ಬಿಜೆಪಿ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಸತತ 2ನೇ ಬಾರಿಗೆ ಸ್ಪಷ್ಟ ಬಹುಮತ ಪಡೆದು ಅಕಾರ ಹಿಡಿದಿತ್ತು. ಕಳೆದ ಬಾರಿ ಬಿಜೆಪಿಯಲ್ಲಿ ಗೆದ್ದಿದ್ದ ಸದಸ್ಯರ ಮೇಲೆ ಒಂದಿಲ್ಲೊಂದು ಆರೋಪಗಳಿವೆ. ಹೀಗಾಗಿ ಇವರ ಬದಲಿಗೆ ಯುವಕರನ್ನು ಅಭ್ಯರ್ಥಿ ಮಾಡುವ ಬಗ್ಗೆ ಪಕ್ಷ ಆಲೋಚಿಸಿದೆ.
ಈಗಾಗಲೇ ಪಾಲಿಕೆಯಲ್ಲಿ ಒಂದು ಬಾರಿ ಮೇಯರ್, ಉಪಮೇಯರ್, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಕಾರವನ್ನು ಅನುಭವಿಸಿದವರಿಗೆ ಪಕ್ಷದ ಸಂಘಟನೆಗೆ ನಿಯೋಜಿಸುವ ಸಾಧ್ಯತೆ ಇದೆ. ಒಂದು ಮೂಲದ ಪ್ರಕಾರ ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಸುಮಾರು 50ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ನಿಚ್ಚಳವಾಗಿದೆ. ಈ ಬಾರಿ ಯಾವುದೇ ಒತ್ತಡ, ಪ್ರಭಾವಿಗಳಿಗೆ ಮಣೆ ಹಾಕದೆ ಪಕ್ಷಕ್ಕೆ ಅವರು ಸಲ್ಲಿಸಿರುವ ಸೇವೆಯನ್ನೇ ಮಾನದಂಡವಾಗಿಟ್ಟುಕೊಂಡು ಟಿಕೆಟ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಬೆಂಗಳೂರು ಪ್ರತಿನಿಸುವ ಯಾವುದೇ ಸಚಿವರ ಲಾಬಿ, ಒತ್ತಡಗಳಿಗೆ ಮಣೆಯದೆ ಪಕ್ಷದಲ್ಲಿ ಸಕ್ರಿಯವಾಗಿರುವವರಿಗೆ ಟಿಕೆಟ್ ಕೊಡಬೇಕು, ಹಿಂಬಾಲಕರು, ಕುಟುಂಬದ ಸದಸ್ಯರಿಗೆ ಆದ್ಯತೆ ನೀಡಲೇ ಬಾರದು ಎಂದು ರಾಜ್ಯವನ್ನು ಪ್ರತಿನಿಸುವ ದೆಹಲಿಯ ಪ್ರಭಾವಿ ಮುಖಂಡರೊಬ್ಬರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ತಮ್ಮ ಹಿಂಬಾಲಕರಿಗೆ ಇಲ್ಲವೇ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷರು ಸೇರಿದಂತೆ ಯಾರೊಬ್ಬರ ಮೇಲೆ ಪ್ರಭಾವ ಬೀರುವುದಾಗಲಿ ಇಲ್ಲವೇ ಒತ್ತಡ ಹಾಕದಂತೆಯೂ ಪಕ್ಷ ಸಚಿವರು ಮತ್ತು ಶಾಸಕರಿಗೆ ಈಗಾಗಲೇ ಮೌಖಿಕವಾಗಿ ಸೂಚನೆ ಕೊಟ್ಟಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಚುನಾವಣೆ ನಡೆಸುವ ಸಂಬಂಧ ಸುಪ್ರೀಂಕೋರ್ಟ್‍ನಲ್ಲಿರುವ ತಕರಾರು ಅರ್ಜಿಯನ್ನು ಶೀರ್ಘವೇ ಇತ್ಯರ್ಥಪಡಿಸಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಚುನಾವಣೆ ನಡೆಸಬೇಕೆಂಬ ಒಲವು ವ್ಯಕ್ತವಾಗಿದೆ.

Articles You Might Like

Share This Article