ಸಿಎಂ ದೆಹಲಿ ಪ್ರವಾಸ : 8 ತಿಂಗಳ ಸಾಧನೆ ಕುರಿತು ಪ್ರಧಾನಿಗೆ ವಿವರಣೆ

Spread the love

ಬೆಂಗಳೂರು,ಏ.27- ಹಲವು ಏಳುಬೀಳುಗಳ ನಡುವೆ ಅಧಿಕಾರಕ್ಕೆ ಬಂದು 8 ತಿಂಗಳು ಪೂರ್ಣಗೊಳಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ 29ರಂದು ದೆಹಲಿಗೆ ತೆರಳಿದ ವೇಳೆ ತಮ್ಮ ಸರ್ಕಾರದ ಸಾಧನೆಗಳ ವರದಿಯನ್ನು ಪ್ರಧಾನಿ ನರೇಂದ್ರಮೋದಿಗೆ ನೀಡಲಿದ್ದಾರೆ.

ಅಧಿಕೃತ ಕಾರ್ಯಕ್ರಮದಲ್ಲಿ ದೆಹಲಿಗೆ ತೆರಳಲಿರುವ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತಮ್ಮ ಸರ್ಕಾರದ
ಸಾಧನೆಗಳು ಹಾಗೂ ಕಾರ್ಯಕ್ರಮ ಅನುಷ್ಠಾನದ ಕುರಿತು ವರದಿಯನ್ನು ಸಲ್ಲಿಸಲಿದ್ದಾರೆ.

ಮುಖ್ಯಮಂತ್ರಿಯಾದ ಬಳಿಕ ಸರ್ಕಾರದಲ್ಲಿ ಮಾಡಿರುವ ಕಾರ್ಯಕ್ರಮಗಳು, ಹೊಸ ಯೋಜನೆಗಳ ಘೋಷಣೆ, ಅನುಷ್ಠಾನ, ಸಚಿವರ ಇಲಾಖಾ ವಾರು ಸಾಧನೆ ಸೇರಿದಂತೆ ಇಡೀ ಸರ್ಕಾರದ ಸಾಧನೆಗಳು ಏನೆಂಬುದನ್ನು ಒಳಗೊಂಡ ಕಿರು ವರದಿಯನ್ನು ಪ್ರಧಾನಿಗೆ ನೀಡುವರು ಎಂದು ತಿಳಿದುಬಂದಿದೆ.

ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಇತ್ತೀಚೆಗೆ ನಡೆಸಿದ ಮಹತ್ವದ ಮಾತುಕತೆಯ ನಂತರ ಬಸವರಾಜ ಬೊಮ್ಮಾಯಿ ಅವರನ್ನು ಮುಂದುವರಿಸಬೇಕೋ, ಬೇಡವೋ ಎಂಬ ಕುರಿತು ನರೇಂದ್ರ ಮೋದಿ ಅವರಿಗೆ ವರದಿ ನೀಡಿದ್ದು, ಈ ವರದಿಯ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದೆ.

ಪ್ರಧಾನಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತಮ್ಮ ಸರ್ಕಾರದ ಎಂಟು ತಿಂಗಳ ಸಾಧನೆಯ ಪ್ರೊಗ್ರೆಸ್ ಕಾರ್ಡ್‍ನ್ನು ಬಸವರಾಜ ಬೊಮ್ಮಾಯಿ ನೀಡಲಿದ್ದು, ಈ ಕಾರ್ಡ್ ತಮ್ಮ ನೆರವಿಗೆ ಬರಲಿದೆ ಎಂದು ನಂಬಿದ್ದಾರೆ.

ಕೊರೊನಾ ಸಂಕಷ್ಟದ ನಡುವೆಯೂ ತಮ್ಮ ಸರ್ಕಾರ ರಾಜ್ಯವನ್ನು ಆರ್ಥಿಕ ಚೇತರಿಕೆಯತ್ತ ಕೊಂಡೊಯ್ದಿದ್ದು, 2.64 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದ ನಂತರ 27 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಬಜೆಟ್‍ನ್ನು ಮಂಡಿಸಿರುವ ಕುರಿತು ಪ್ರಧಾನಿಗೆ ವಿವರಣೆ ನೀಡಲಿದ್ದಾರೆ.

ಬಜೆಟ್ ಜತೆ ಹೆಚ್ಚುವರಿ ಬಜೆಟ್ ಮಂಡಿಸಲಾಗಿದ್ದು, ಅದೇ ಕಾಲಕ್ಕೆ ಮೇ 15ರ ಒಳಗಾಗಿ ಯೋಜನೆಗಳಿಗೆ ಸಂಬಂಧಿಸಿದ ಕಾರ್ಯಾದೇಶವನ್ನು ಪ್ರಕಟಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ಬಜೆಟ್‍ನಲ್ಲಿ ಹೇಳಿದ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಇಷ್ಟು ಬೇಗ ಕಾರ್ಯಾದೇಶ ನೀಡಿದ ಮತ್ತೊಂದು ಸರ್ಕಾರ ಕರ್ನಾಟಕದಲ್ಲಿ ಬಂದಿಲ್ಲ.

ಇದರಿಂದ ಪಕ್ಷದ ಶಾಸಕರಿಗೆ ಅನುಕೂಲವಾಗುವುದಲ್ಲದೆ ಮುಂದಿನ ಚುನಾವಣೆಯನ್ನು ಎದುರಿಸಲು ಜನರ ಮುಂದೆ ಹೋಗಲು ನೆರವಾಗುತ್ತದೆ. ಈ ಮಧ್ಯೆ ತಾವು ನಿರಂತರವಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದು, ರಾಜ್ಯದಲ್ಲಿ ಪಕ್ಷದ ಸಂಘಟನೆಯನ್ನು ಬಲಗೊಳಿಸಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಅವರು ವರಿಷ್ಠರ ಮುಂದೆ ವಿವರಿಸಲಿದ್ದಾರೆ.

Facebook Comments