ಬೆಂಗಳೂರು, ಫೆ.24- ಹಿಂದೂಪರ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಹಾಗೂ ಹಿಜಾಬ್ ಗದ್ದಲ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ(NIA) ಒಪ್ಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಸ್ವಪಕ್ಷೀಯ ಶಾಸಕರು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆರ್‍ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ವಿಚಾರದ ಕುರಿತು ಚರ್ಚಿಸಿದ್ದರು. ಈ ವೇಳೆ ಟಾರ್ಗೆಟ್ ಆಗಿರುವ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಕೊಡುವ ಬಗ್ಗೆ ಮನವಿ ಮಾಡಿದರು.
ಪ್ರಕರಣದ ಆರೋಪಿಗಳ ವಿಚಾರದಲ್ಲಿ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಅಗತ್ಯವಿದ್ದಲ್ಲಿ ಎನ್‍ಐಎ ತನಿಖೆ ವಹಿಸುವಂತೆ ಮನವಿ ಮಾಡಿದರು. ಯತ್ನಾಳ್ ಭೇಟಿ ನಂತರ ಸಿಎಂ ನಿವಾಸಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಆಗಮಿಸಿ, ಹಿಜಾಬ್ ಸಂಘರ್ಷ ವಿಚಾರದ ಬಗ್ಗೆ ಚರ್ಚೆ ನಡೆಸಿದರು.
ಉಡುಪಿಯ ಶಾಲಾ-ಕಾಲೇಜುಗಳ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದರು. ಹಿಜಾಬ್ ಪ್ರಕರಣವನ್ನು ಎನ್‍ಐಎಗೆ ವಹಿಸಲು ಮನವಿ ಮಾಡಿದ್ದಾರೆ.
