ಬೆಂಗಳೂರು,ಜ.28- ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ. ಅವಕಾಶ ಸಿಕ್ಕ ಕೂಡಲೇ ದೆಹಲಿಗೆ ತೆರಳಿ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದರು. ತಮ್ಮ ಹುಟ್ಟುಹಬ್ಬ ಹಾಗೂ 6 ತಿಂಗಳು ಆಡಳಿತ ಪೂರೈಸಿದ ಅಂಗವಾಗಿ ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಯಡಿಯೂರಪ್ಪನವರು ನನಗೆ ಆಶೀರ್ವಾದ ಮಾಡಿದ್ದಾರೆ. ಅಲ್ಲದೆ ಒಳ್ಳೆಯ ಆಡಳಿತ ನೀಡಿದ್ದೀರಿ. ಹೀಗೆ ಮುಂದುವರೆಯಿರಿ ಎಂದು ಹಾರೈಸಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ನಡೆಸಿದೆವು. ದೆಹಲಿ ವರಿಷ್ಠರ ಭೇಟಿಗೆ ಸಮಯ ಕೇಳಲಾಗಿದೆ. ಅವರು ಅವಕಾಶ ಕೊಟ್ಟ ಕೂಡಲೇ ಅವರೊಂದಿಗೆ ಚರ್ಚೆ ನಡೆಸಿ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಲ್ಲದೆ ದೆಹಲಿಯಲ್ಲಿ ಸಂಸದರೊಂದಿಗೆ ಸಭೆ ನಡೆಸುವುದಾಗಿ ಕೂಡ ತಿಳಿಸಿದರು.
ನಾನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೂ ರಾಜ್ಯಾದ್ಯಂತ ನನ್ನ ಜನರು, ಸ್ನೇಹಿತರು, ಶಾಸಕರು, ಕ್ಷೇತ್ರದ ಜನತೆ ಶುಭಾಶಯ ತಿಳಿಸಿದ್ದಾರೆ ಎಂದರು. ನಿನ್ನೆ ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ರಾಷ್ಟ್ರಪತಿ ಕೂಡ ವಿಶ್ ಮಾಡಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ಹೇಳಬಯಸುತ್ತೇನೆ. ಇಂದು ನಮ್ಮ ಸರ್ಕಾರಕ್ಕೆ 6 ತಿಂಗಳು ತುಂಬಿದೆ. ಹಾಗಾಗಿ ಆಡಳಿತ ಪಕ್ಷಿನೋಟದ ಒಂದು ಕಿರು ಹೊತ್ತಿಗೆ ತರಲಾಗಿದೆ ಎಂದು ತಿಳಿಸಿದರು.
ಕೋವಿಡ್, ಪ್ರವಾಹ ನಿರ್ವಹಣೆ ಮುಂತಾದ ವಿಷಯಗಳನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದೇವೆ. ರಾಜ್ಯದ ಆರ್ಥಿಕ ದೃಷ್ಟಿಯಿಂದ ಒಳ್ಳೆಯ ಬಜೆಟ್ ನೀಡಬೇಕಾಗಿದೆ. ಅದಕ್ಕಾಗಿ ಒತ್ತು ನೀಡುತ್ತಿದ್ದೇವೆ ಎಂದು ಹೇಳಿದರು.
ಭೇಟಿ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಯಡಿಯೂರಪ್ಪ ಅವರೊಂದಿಗೆ ಪ್ರತ್ಯೇಕವಾಗಿ 10 ನಿಮಿಷ ಮಾತುಕತೆ ನಡೆಸಿದರು.
ಸಿಎಂ ಬೊಮ್ಮಾಯಿ ಹಾಗೂ ಸಚಿವರಾದ ಪ್ರಭು ಚವ್ಹಾಣ್, ಶಂಕರ್ ಪಾಟೀಲ್ ಮುನೇನಕೊಪ್ಪ , ಭೈರತಿ ಬಸವರಾಜ್ ಅವರು ಕೂಡ ಯಡಿಯೂರಪ್ಪ ಅವರಿಂದ ಆಶೀರ್ವಾದ ಪಡೆದುಕೊಂಡರು.
ಇದಕ್ಕೂ ಮುನ್ನ ಬಸವರಾಜ ಬೊಮ್ಮಾಯಿ ಅವರು ಬಾಲಗೃಹಿ ಅತಿಥಿಗೃಹದ ಪಕ್ಕದಲ್ಲಿರುವ ಭಗವಾನ್ ಶ್ರೀ ಮಾರುತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
