ಬೆಂಗೂಳೂರಿನಲ್ಲಿ ಉಲ್ಬಣಿಸಿದ ಡೆಂಘೀ ಹತೋಟಿಗೆ BBMP ಕಸರತ್ತು

ಬೆಂಗಳೂರು,ಏ.12- ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ನಗರದಲ್ಲಿ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದ ಕೆಲವು ಪ್ರದೇಶಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಈಗಾಗಲೇ ನಗರದಾದ್ಯಂತ 1793 ಡೆಂಘೀ ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷ ಒಟ್ಟಾರೆ 1800 ಪ್ರಕರಣಗಳು ದಾಖಲಾಗಿದ್ದವು, ಆದರೆ, ಈ ವರ್ಷ ಆರಂಭದಲ್ಲೇ 1793 ಪ್ರಕರಣಗಳು ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂದಿನ ದಿನದಲ್ಲಿ ಡೆಂಘೀ ಮತ್ತು ಮಲೇರಿಯಾದಂತೆ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಗಳಿವೆ.
ನಿಂತ ನೀರಿನಲ್ಲಿ ಲಾರ್ವ ಉತ್ಪತ್ತಿಯಾಗುವುದನ್ನು ತಡೆಗಟ್ಟಲು ಈಕೂಡಲೇ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್‍ಚಂದ್ರ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಶಾಲಾ -ಕಾಲೇಜುಗಳ ಸಮೀಪ ಸೊಳ್ಳೆಗಳು ಹೆಚ್ಚಾಗುತ್ತಿರುವುದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುತ್ತಿರುವವರ ಆರೋಗ್ಯ ತಪಾಸಣೆ ನಡೆಸುವಂತೆ ಅವರು ಸೂಚಿಸಿದ್ದಾರೆ. ಸೊಳ್ಳೆ ಹೆಚ್ಚಿರುವ ಪ್ರದೇಶಗಳು ಹಾಗೂ ಲಾರ್ವ ಉತ್ಪತ್ತಿಯಾಗುವ ನಿಂತ ನೀರಿನ ಮೇಲೆ ಲಾರ್ವಿಸೈಡ್ ಹಾಗೂ ಫಾಗಿಂಗ್ ಮಾಡುವಂತೆಯೂ ಅವರು ಸೂಚನೆ ನೀಡಿದ್ದಾರೆ.

ಪೂರ್ವ ವಲಯದಲ್ಲೇ ಹೆಚ್ಚು: ನಗರದ ಪೂರ್ವ ವಲಯದಲ್ಲಿ ಅತಿ ಹೆಚ್ಚು ಡೆಂಘೀ ಪ್ರಕರಣಗಳು ದಾಖಲಾಗಿರುವುದು ವಿಶೇಷ.
ಬೊಮ್ಮನಹಳ್ಳಿ – 104 ಪ್ರಕರಣ
ದಾಸರಹಳ್ಳಿ – 38 ಪ್ರಕರಣ
ಪೂರ್ವ – 653 ಪ್ರಕರಣ
ಮಹದೇವಪುರ – 342 ಪ್ರಕರಣ
ಆರ್.ಆರ್ ನಗರ – 122 ಪ್ರಕರಣ
ಸೌತ್ – 170 ಪ್ರಕರಣ
ಪಶ್ಚಿಮ – 162 ಪ್ರಕರಣ
ಯಲಹಂಕ – 202 ಪ್ರಕರಣ

ಡೆಂಘೀ ನಿಯಂತ್ರಣ ಹೇಗೆ: 
ಸಾಂಕ್ರಾಮಿಕ ರೋಗದಿಂದ ಬಚವಾಗಬೇಕಾದರೆ ಜನ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಹೂಕುಂಡಗಳಲ್ಲಿ, ತೆಂಗಿನ ಚಿಪ್ಪುಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರವಹಿಸಬೇಕು. ಮನೆಗಳಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದರೆ, ದೇಹವನ್ನು ಸಂಪೂರ್ಣವಾಗಿ ಬಟ್ಟೆಯಿಂದ ರಕ್ಷಣೆ ಮಾಡಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆ ಉಪಯೋಗ ಮಾಡುವುದು ಸೂಕ್ತ.

ಮಕ್ಕಳಿಗೆ ಸೊಳ್ಳೆ ಕಡಿತವಾಗಿದ್ದರೆ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಸೂಚನೆ ಪಡೆದುಕೊಳ್ಳುವಂತೆ ತ್ರಿಲೋಕ್ ಚಂದ್ರ ಅವರು ಮನವಿ ಮಾಡಿಕೊಂಡಿದ್ದಾರೆ. ಅಗತ್ಯ ಕ್ರಮ: ನಗರದಲ್ಲಿ ಡೆಂಘೀ, ಮಲೇರಿಯಾದಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ಬಿಬಿಎಂಪಿವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈಗಾಗಲೇ ಡೋರ್ ಟು ಡೋರ್ ಸರ್ವೇ ಕಾರ್ಯ ಆರಂಭಿಸಲಾಗಿದೆ. ನಿಂತ ನೀರಿನಲ್ಲಿ ಲಾರ್ವಾ ಉತ್ಪತ್ತಿಯಾಗದಂತೆ ರಾಸಾಯನಿಕ ಸಿಂಪಡಿಸಲಾಗುತ್ತಿದೆ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.