ಹುಷಾರ್, ನಿಮ್ಮ ಸುತ್ತಮುತ್ತ ಪರಿಸರ ಸ್ವಚ್ಛವಾಗಿರದಿದ್ದರೆ ಡೆಂಗ್ಯೂ ಗ್ಯಾರಂಟಿ..!

Spread the love

ಮಳೆಗಾಲ ಬರುತ್ತಿದ್ದಂತೆ ಸೊಳ್ಳೆಗಳ ಸಂಖ್ಯೆ ಹೆಚ್ಚಿದೆ. ಸೊಳ್ಳೆಗಳು ಕೇವಲ ಉಪದ್ರವ ಉಂಟು ಮಾಡುವುದಲ್ಲದೆ, ಗಂಭೀರ ಕಾಯಿಲೆಗಳನ್ನು (ಡೆಂಘೀ, ಮಲೇರಿಯಾ)ಹರಡುತ್ತವೆ. ಇದು ನಾವೆಲ್ಲರೂ ಅರಿತಿದ್ದೇವೆ. ಸೊಳ್ಳೆಗಳಿಂದ ಬರುವ ರೋಗಗಳಿಗೆ ಯಾವುದೇ ಗುಣಪಡಿಸುವ ಚಿಕಿತ್ಸೆಯಾಗಲಿ ಮತ್ತು ಲಸಿಕೆಯಾಗಲಿ ಇರುವುದಿಲ್ಲ.

ಆದ್ದರಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ಏಕೈಕ ಮಾರ್ಗ ಎಂದರೆ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳುವುದು.ರೋಗವನ್ನು ತಡೆಯುವುದು ಗುಣಪಡಿಸುವುದಕ್ಕಿಂತಲೂ ಉತ್ತಮ. ಈ ರೀತಿ ತಡೆಯುವಲ್ಲಿ ಮೊಟ್ಟಮೊದಲ ಮತ್ತು ಅತ್ಯಂತ ಮುಖ್ಯವಾದ ಕ್ರಮ ಎಂದರೆ ಸೊಳ್ಳೆ ನಿಯಂತ್ರಣವಾಗಿದೆ.

ಮನೆಯ ಸುತ್ತಲೂ ಇರುವ ಟೈರ್‍ಗಳು, ಬಕೆಟ್‍ಗಳು, ಆಟಿಕೆಗಳು, ಅಲ್ಲಲ್ಲಿ ನಿಂತಿರುವ ನೀರು, ಹೂವಿನ ಕುಂಡಗಳು ಅಥವಾ ಕಸದ ಡಬ್ಬಿಗಳಲ್ಲಿ ನಿಂತಿರುವ ನೀರಿನಲ್ಲಿ ಸಾಮಾನ್ಯವಾಗಿ ಸೊಳ್ಳೆಗಳು ಬೆಳೆಯುತ್ತವೆ ಅಥವಾ ತಮ್ಮ ಸಂತಾನಾಭಿವೃದ್ಧಿ ಮಾಡಿಕೊಳ್ಳುತ್ತವೆ.

ಆದ್ದರಿಂದ ನಿಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಸುತ್ತಲೂ ಯಾವ ಸ್ಥಳದಲ್ಲಿಯೂ ನೀರು ನಿಲ್ಲದಿರುವುದನ್ನು ಖಾತ್ರಿ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ನಿಗದಿತ ಅವಧಿಗೊಮ್ಮೆ ಸೊಳ್ಳೆಗಳನ್ನು ನಿಯಂತ್ರಿಸುವ ಕೀಟನಾಶಕ ಸಿಂಪಡಣೆ ಮಾಡುವುದು ಮುಖ್ಯ.

ಮಕ್ಕಳ ವಿಷಯದಲ್ಲಿ ನಾವು ಬಹಳಷ್ಟು ಎಚ್ಚರಿಕೆ ವಹಿಸಬೇಕು. ಏಕೆಂದರೆ ಅವರು ಈ ರೀತಿಯ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಆದ್ದರಿಂದ ಈ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಪೂರ್ತಿ ತೋಳಿನ ಮತ್ತು ಕಾಲುಗಳನ್ನು ಮುಚ್ಚುವ ಉಡುಪುಗಳನ್ನು ತೊಡಿಸುವುದು ಒಳ್ಳೆಯದು. ಜತೆಗೆ ಈ ಉಡುಪುಗಳು ಹಗುರವಾದ ಬಣ್ಣ ಹೊಂದಿರಬೇಕಲ್ಲದೆ, ಧರಿಸಲು ಸಡಿಲವಾಗಿರಬೇಕು.

ಹೊರಾಂಗಣದಲ್ಲಿರುವಾಗ ಸೊಳ್ಳೆ ಪರದೆಗಳನ್ನು ಪ್ರ್ಯಾಮ್ ಮತ್ತು ಸ್ಟ್ರಾಲರ್‍ಗಳ ಮೇಲೆ ಮುಚ್ಚಿರಿ. ಬಾಗಿಲುಗಳ ಮೇಲೆ ಸೊಳ್ಳೆ ನಿರೋಧಕ ಪರದೆಗಳನ್ನು ಹಾಕಿಸಿ. ಇದರಿಂದ ಸೊಳ್ಳೆಗಳು ಒಳಗೆ ಬರಲು ಸಾಧ್ಯವಾಗುವುದಿಲ್ಲ. ಸೊಳ್ಳೆ ಓಡಿಸುವ ಮಸ್ಕಿಟೊ ರಿಪೆಲೆಂಟ್ ಮತ್ತು ರಿಪೆಲೆಂಟ್ ಲಿಕ್ವಿಡೇಟರ್‍ಗಳನ್ನು ಬಳಸುವುದು ಸೂಕ್ತ. ರೋಗದ ಸೋಂಕು ಹರಡುವ ಸೊಳ್ಳೆಗಳು ಸಾಮಾನ್ಯವಾಗಿ ದಿನದ ಹೊತ್ತಿನಲ್ಲಿ ಮನೆ ಒಳಗೆ ಮತ್ತು ಹೊರಗಡೆ ಕಚ್ಚುತ್ತವೆ. ಆದ್ದರಿಂದ ದಿನದ ಹೊತ್ತಿನಲ್ಲಿ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿರುತ್ತದೆ.

ನೀವು ಎಚ್ಚರಿಕೆಯಿಂದ ಗಮನಿಸಬೇಕಾದ ಅದರಲ್ಲೂ ಮಕ್ಕಳಲ್ಲಿ ಗಮನವಿಡಬೇಕಾದ ಕೆಲವು ಲಕ್ಷಣಗಳಲ್ಲಿ ತಲೆನೋವು, ಜ್ವರ, ಮೈ-ಕೈ ನೋವು, ಕಣ್ಣು ನೋವು ಸೇರಿರುತ್ತವೆ. ಈ ಲಕ್ಷಣಗಳು ಕಾಣುತ್ತಿವೆ ಎಂಬ ಶಂಕೆ ಇದ್ದಲ್ಲಿ ವೈದ್ಯರ ಸಲಹೆ ಪಡೆದುಕೊಳ್ಳಿ.

ಸಾಕಷ್ಟು ನೀರು, ದ್ರವ ಪದಾರ್ಥ ಸೇವಿಸು ವುದು ಅತೀ ಮುಖ್ಯ. ಮಕ್ಕಳಿಗೆ ನೀರು, ಹಣ್ಣಿನ ರಸಗಳು, ಎಳನೀರು ಮುಂತಾದವುಗಳನ್ನು ನೀಡಿ. ಆದಷ್ಟು ಪೋಷಕಾಂಶಯುಕ್ತ ಆಹಾರ ಸೇವಿಸಲು ಪ್ರೋತ್ಸಾಹಿಸಿ.

ಡೆಂಘೀ ರೋಗದಲ್ಲಿ ಪಪ್ಪಾಯ ಎಲೆಯ ರಸದ ಪಾತ್ರ ಇನ್ನು ಸ್ಪಷ್ಟವಾಗಿಲ್ಲ. ಆದರೂ ವೈದ್ಯರ ಸಲಹೆ ಪಡೆದು ಅದಕ್ಕೆ ತಕ್ಕಂತೆ ಚಿಕಿತ್ಸೆ ಹೊಂದುವುದು ಉತ್ತಮ. ಸ್ವಯಂ ಚಿಕಿತ್ಸೆಯಾಗಿ ಪಪ್ಪಾಯ ರಸವನ್ನು ಸೇವಿಸಬೇಡಿ. ಇದರಿಂದ ಹೆಚ್ಚಿನ ವಾಂತಿಯಾಗಿ ನಿರ್ಜಲೀಕರಣ ಅಂದರೆ ಡಿ ಹೈಡ್ರೇಷನ್ ಉಂಟಾಗಬಹುದು. ಇದರಿಂದ ಡೆಂಘೀ ಜ್ವರದ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಪಪ್ಪಾಯ ಹಣ್ಣುಗಳು ಮತ್ತು ಇತರೆ ಹಣ್ಣುಗಳನ್ನು ನೀಡುವುದು ಸುರಕ್ಷಿತವಾಗಿರುತ್ತದೆ.

ಹವಾಮಾನದಲ್ಲಿ ಬದಲಾವಣೆಯಾದಾಗ ಮಕ್ಕಳಿಗೆ ಸಾಮಾನ್ಯವಾಗಿ ಜ್ವರ ಅಥವಾ ನೆಗಡಿ ಉಂಟಾಗುತ್ತದೆ. ವಾತಾವರಣ ಬದಲಾವಣೆಯಾಗುವುದರಿಂದ ತಾಪಮಾನದಲ್ಲಿ ಬದಲಾವಣೆಯಾಗಿ ಅನೇಕ ರೀತಿಯ ವೈರಸ್‍ಗಳು ಬೆಳೆಯಲು ಸಾಧ್ಯವಾಗಿರುತ್ತದೆ. ಕೈ-ಕಾಲು ಬಾಯಿ ರೋಗಗಳ ಸಂಖ್ಯೆ ಹೆಚ್ಚಾಗುತ್ತದೆ. ಮಕ್ಕಳು ಮುಖ್ಯವಾಗಿ ಸೀನುವಾಗ ಅಥವಾ ಕೆಮ್ಮುವಾಗ ಅಲ್ಲದೆ, ಇತರೆ ಸಂದರ್ಭಗಳಲ್ಲಿ ನೈರ್ಮಲ್ಯದ ಅಭ್ಯಾಸಗಳನ್ನು ಹೊಂದಿರುವುದು ಮುಖ್ಯವಾಗಿರುತ್ತದೆ.

ಕಲುಷಿತ ವಸ್ತುಗಳನ್ನು ಸ್ಪರ್ಶಿಸಿದ ನಂತರ ಮುಖ ಸ್ಪರ್ಶಿಸುವುದನ್ನು ತಪ್ಪಿಸಿ. ಸೂಕ್ಷ್ಮ ಕ್ರಿಮಿಗಳು ಹರಡುವುದನ್ನು ತಪ್ಪಿಸಲು ನೀವು ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಟಿಶ್ಯೂ ಪೇಪರ್‍ನೊಂದಿಗೆ ಮುಚ್ಚಿಕೊಳ್ಳಿ. ಕೆಮ್ಮಿದ ಅಥವಾ ಸೀನಿದ ನಂತರ ಸೋಪು ಮತ್ತು ನೀರು ಬಳಸಿ ಕೈ ತೊಳೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

ನೆಗಡಿಯ ಸಂದರ್ಭದಲ್ಲಿ ನಿಂಬೆ ಜಾತಿಯ ಹಣ್ಣುಗಳ ಸೇವನೆಯನ್ನು ತಪ್ಪಿಸಬೇಕೆಂಬ ಸಾಮಾನ್ಯ ತಪ್ಪು ಕಲ್ಪನೆ ಇದೆ. ಬದಲಿಗೆ ಈ ನಿಂಬೆ ಜಾತಿ ಹಣ್ಣುಗಳಾದ ಕಿತ್ತಳೆ, ಮೂಸಂಬಿ ಮುಂತಾದವುಗಳಲ್ಲಿ ವಿಟಮಿನ್ ಸಿ ಇದ್ದು, ಇದು ಜ್ವರದ ಅವಧಿಯನ್ನು ಕಡಿಮೆ ಮಾಡುತ್ತವೆ. ಕಿತ್ತಳೆ ಹಣ್ಣುಗಳು, ಪೈನಾಪಲ್ ಮತ್ತು ಪಾಲಕ್‍ನಂತಹ ತರಕಾರಿಗಳು ವಿಟಮಿನ್ ಸಿ ನ ಉತ್ತಮ ಮೂಲಗಳಾಗಿರುತ್ತವೆ. ಜತೆಗೆ ದೇಹದ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇನ್‍ಫ್ಲೂಯೆನ್ಜಾ ಲಸಿಕೆಯನ್ನು ಮಕ್ಕಳಿಗೆ ಹಾಕಿಸುವುದು ಮುಖ್ಯವಾಗಿರುತ್ತದೆ.

– ಡಾ.ಗುರುರಾಜ್ ಬಿರಾದಾರ್