ಅರಸು ಹೆಸರಲ್ಲಿ ಜಿಲ್ಲಾ ಮಟ್ಟದಲ್ಲೂ ಪ್ರಶಸ್ತಿ : ಸಿಎಂ ಘೋಷಣೆ

Social Share

ಬೆಂಗಳೂರು,ಆ.20- ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿ ವರ್ಷ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಹೆಸರಿನಲ್ಲಿ ನೀಡಲಾಗುತ್ತಿದ್ದ ರಾಜ್ಯಮಟ್ಟದ ಪ್ರಶಸ್ತಿಯನ್ನು ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈವರೆಗೂ ದೇವರಾಜ ಅರಸು ಹೆಸರಿನಲ್ಲಿ ಪ್ರತಿ ವರ್ಷ ಅವರ ಹುಟ್ಟುಹಬ್ಬದ ವೇಳೆ ಸಾಧಕರನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದೆವು.

ನಮ್ಮ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಅವರ ಕನಸುಗಳನ್ನು ನನಸು ಮಾಡಲು ಜಿಲ್ಲಾಮಟ್ಟದಲ್ಲೂ ಪ್ರಶಸ್ತಿಯನ್ನು ನೀಡಲಿದ್ದೇವೆ ಎಂದು ಪ್ರಕಟಿಸಿದರು. ಕರ್ನಾಟಕದ ಇವತ್ತಿನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕದ ಯಶಸ್ಸಿಗೆ ಬಹುಪಾಲು ಅರಸು ಅವರ ದೂರದೃಷ್ಟಿಯೇ ಕಾರಣ. ಮುಖ್ಯಮಂತ್ರಿ ಆದಮೇಲೆ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರು. ಉಳುವವನೇ ಒಡೆಯ ಚಳವಳಿಗೆ ಕಾನೂನಿನ ಶಕ್ತಿ ತುಂಬಿದರು.

ಜನತಾ ಮನೆ, ಪಡಿತರ ವ್ಯವಸ್ಥೆ ಆರಂಭವಾಗಿದ್ದು ಅರಸು ಕಾಲದಲ್ಲಿ ವ್ಯವಸಾಯದಲ್ಲಿ ಸುಧಾರಣೆ ತಂದಿದ್ದು ಅರಸು ಅವರು. ಕಾಳಿ ವಿದ್ಯುತ್ ಯೋಜನೆ ತಂದರು, ಸಣ್ಣ ಸಣ್ಣ ಸಮಾಜದಲ್ಲಿನವರನ್ನ ಗುರುತಿಸಿ ನಾಯಕತ್ವ ಬೆಳೆಸಿದರು, ಸಾಮಾಜಿಕ ನ್ಯಾಯ ಪ್ರತಿಪಾದಿಸಿ ಜಾರಿಗೆ ತಂದರು. ಆದರೆ ಇಂದು ಸಾಮಾಜಿಕ ನ್ಯಾಯ ಪ್ರತಿಪಾದನೆ ಕೇವಲ ಭಾಷಣಕ್ಕೆ ಸೀಮಿತವಾಗಿದೆ ಎಂದು ವಿಷಾದಿಸಿದರು.

ಸಮಾಜದ ಕಟ್ಟಕಡೆಯವರಿಗೆ ನ್ಯಾಯ ಸಿಗಬೇಕಿದೆ. 2439 ಹಾಸ್ಟೆಲ್ ಗಳು ರಾಜ್ಯದಲ್ಲಿವೆ ಇವುಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು ದೇವರಾಜ ಅರಸು ಹೆಸರಲ್ಲಿ ಪಿಹೆಚ್‍ಡಿ ಮಾಡುತ್ತಿರುವವರಿಗೆ ಹೆಚ್ಚಿನ ಅನುದಾನ ಕೊಡಲಾಗುವುದು ಎಂದು ತಿಳಿಸಿದರು.

ಈವರೆಗೆ ನಿಂತುಹೋಗಿದ್ದ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಮುಂದುವರಿಸುತ್ತೇವೆ. ಹಿಂದುಳಿದ ವರ್ಗದ ನಿಗಮ ಮಂಡಳಿಗೆ ಹೆಚ್ಚಿನ ಅನುದಾನ ನೀಡಿ, 5 ಲಕ್ಷ ಜನರಿಗೆ ಪುನರ್‍ಕೆಲಸ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇತ್ತೀಚೆಗೆ ಹಿಂದುಳಿದ ಮಠಗಳು ಉತ್ತಮ ಕೆಲಸ ಮಾಡುತ್ತಿವೆ. ಹಿಂದುಳಿದ ಮಠಗಳಿಗೆ 129 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದರು.

ಸಚಿವ ಕೋಟಾ ಶ್ರಿನಿವಾಸ್ ಪೂಜಾರಿ ಮಾತನಾಡಿ, ಇಂದು ನನ್ನ ಇಲಾಖೆ ಅತ್ಯಂತ ಸಂಭ್ರಮದ ದಿನ. ದ್ವನಿ ಇಲ್ಲದವರಿಗೆ ಧ್ವನಿಯಾಗಿ, ಶೋಷಿತರ ಹಿಂದುಳಿದವರ ಬಂಧು ಅರಸು ಜನ್ಮ ದಿನ. ಅರಸು ಹೇಗೆ ಆಡಳಿತಾತ್ಮಕ ಶಕ್ತಿ ಕೊಟ್ಟರೋ ಹಾಗೆ ನಮ್ಮ ಸಿಎಂ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ವಿಶ್ವಾಸ ಇದೆ ಎಂದರು.

ಕುಂಬಾರ, ನೇಕಾರ ಸೇರಿದಂತೆ ಕುಲಕಸುಬುಗಳ ಉತ್ಪನ್ನಗಳ ಮಾರಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ಉತ್ತರ ಕರ್ನಾಟಕ, ಮಂಗಳೂರು ಭಾಗದಲ್ಲಿ ಸೇನಾ ಪೂರ್ವ ತರಬೇತಿ ಶಾಲೆ ಆರಂಭ ಮಾಡುವುದಾಗಿ ಪ್ರಕಟಿಸಿದರು. ಶಾಸಕ ಕುಮಾರ್ ಬಂಗಾರಪ್ಪ, ಪಿ.ರಾಜೀವ್, ಎಂಎಲ್‍ಸಿಗಳಾದ ಹೇಮಲತಾ ನಾಯಕ್, ಬಾಬುರಾವ್ ಚಿಂಚನಸೂರ್ ಉಪಸ್ಥಿತರಿದ್ದರು.

Articles You Might Like

Share This Article