ಬೆಂಗಳೂರು, ಜ.1- ಏರಿಕೆಯಾಗುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳು, ಓಮಿಕ್ರಾನ್ ವೈರಸ್ನ ಆತಂಕದ ನಡುವೆಯೂ ಹೊಸ ವರ್ಷದ ಆರಂಭದ ದಿನವಾದ ಇಂದು ಜನ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ, ಹವನಗಳು ಜರುಗಿದವು. ಎಲ್ಲೆಡೆ ಕೊರೊನಾ ನಿಯಂತ್ರಣ ಮಾರ್ಗಸೂಚಿ, ಕಟ್ಟುಪಾಡುಗಳನ್ನು ಬಿಗಿಗೊಳಿಸಲಾಗಿತ್ತಾದರೂ ಸ್ವಯಂ ನಿಯಂತ್ರಣದೊಂದಿಗೆ ಜನ ರಾಜ್ಯದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮೈಸೂರಿನ ಚಾಮುಂಡಿಬೆಟ್ಟ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ, ಕೋಲಾರದ ಚಿಕ್ಕ ತಿರುಪತಿ, ಕೋಟಿ ಲಿಂಗೇಶ್ವರ, ನಂಜನಗೂಡಿನ ನಂಜುಂಡೇಶ್ವರ, ರಾಜಧಾನಿ ಬೆಂಗಳೂರಿನ ಕಾಡುಮಲ್ಲೇಶ್ವರ, ಹಲಸೂರು ಸೋಮೇಶ್ವರ, ಮಹಾಲಕ್ಷ್ಮಿ ಲೇಔಟ್ನ ಆಂಜನೇಯ, ರಾಗಿಗುಡ್ಡದ ಆಂಜನೇಯ ಸೇರಿದಂತೆ ಪ್ರಸಿದ್ಧ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಹೊಸ ವರ್ಷದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲೂ ಕೂಡ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವರಿಗೆ ವಿಶೇಷ ಪೂಜೆ, ಹೋಮ-ಹವನಗಳನ್ನು ನಡೆಸಲಾಯಿತು. ಕೋವಿಡ್-19ನಿಂದ ಜರ್ಝರಿತರಾಗಿರುವ ಜನ ನಿನ್ನೆಯಿಂದಲೇ ದೇವಸ್ಥಾನಗಳಿಗೆ ತೆರಳಲಾರಂಭಿಸಿದ್ದರು. ಹೊಸ ವರ್ಷದ ದಿನವಾದ ಇಂದು ಎಲ್ಲ ದೇವಾಲಯಗಳಲ್ಲಿ ಜರುಗಿದ ವಿಶೇಷ ಪೂಜೆಗಳಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.
ಧರ್ಮಸ್ಥಳದಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಮೂಲೆ ಮೂಲೆಗಳಿಂದಲೂ ಜನ ಆಗಮಿಸಿದ್ದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆಯಿಂದಲೇ ಜನ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಭಕ್ತರ ದಂಡು ಹರಿದು ಬಂದಿತ್ತು. ಕೇಸರಿ ರುಮಾಲು ತೊಟ್ಟ ಯುವಕರ ಪಡೆ ಆಂಜನೇಯನಿಗೆ ಜೈಕಾರ ಕೂಗಿ ಬೆಟ್ಟವನ್ನು ಹತ್ತಿ ದರ್ಶನ ಪಡೆದರು.
ತಿರುಪತಿಯಲ್ಲೂ ಕೂಡ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಸಹಸ್ರಾರು ಜನ ತಿಮ್ಮಪ್ಪನ ದರ್ಶನ ಪಡೆದು ಕೃತಾರ್ಥರಾದರು. ರಾಜಧಾನಿ ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಬೆಳಗ್ಗೆ ಬ್ರಾಹ್ಮೀ ಮುಹೂರ್ತದ ಸಮಯದಿಂದಲೇ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ದಿನವಿಡೀ ದೇವಸ್ಥಾನದಲ್ಲಿ ವಿಶೇಷ ಪೂಜಾ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ದೇವಸ್ಥಾನಕ್ಕೆ ತೆರಳಿದ ಜನ ಕೃಷ್ಣನ ದರ್ಶನ ಪಡೆದು ಪುನೀತರಾದರು.
ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ, ಹೊರನಾಡು ಅನ್ನಪೂರ್ಣೇಶ್ವರಿ, ಇಡಗುಂಜಿ ಗಣಪತಿ, ಸಿಗಂಧೂರು ಚೌಡೇಶ್ವರಿ ದೇವಾಲಯ ಸೇರಿದಂತೆ ಬಹುತೇಕ ಎಲ್ಲ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು.
ವರ್ಷಾರಂಭದ ದಿನವಾದ ಇಂದು ಭಗವಂತನ ಪ್ರೇರಣೆ ನಮ್ಮ ಮೇಲಿರಲಿ. ಯಾವುದೇ ತೊಂದರೆಗಳಿಲ್ಲದೆ ಭಗವಂತ ನಮ್ಮನ್ನು ಕಾಪಾಡಲಿ. ಅದರಲ್ಲೂ ಕೊರೊನಾ ಎಂಬ ಮಹಾಮಾರಿ ತೊಲಗಲಿ ಎಂದು ಆಸ್ತಿಕ ಭಕ್ತರು ಭಗವಂತನಲ್ಲಿ ಎಲ್ಲೆಡೆ ಪ್ರಾರ್ಥಿಸುತ್ತಿದ್ದುದು ಕಂಡುಬಂತು.
