ನವದೆಹಲಿ, ಫೆ.28- ದೇಶದಲ್ಲಿ ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಅಮಾನತ್ತನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಇಂದು ತಿಳಿಸಿದೆ.ಜನವರಿ 19 ರಂದು ಹೊರಡಿಸಲಾಗಿದ್ದ ಆದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಅಮಾನತನ್ನು ಇಂದಿಗೂ (ಫೆ.28) ವಿಸ್ತರಿಸಲಾಗಿತ್ತು. ಈ ಮೊದಲು ಕೊರೋನಾ ಸೋಂಕಿನಿಂದಾಗಿ ಭಾರತ 2020ರ ಮಾರ್ಚ್ 23 ರಿಂದ ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ಆದಾಗ್ಯೂ, ವಿಶೇಷ ಸಂದರ್ಭದಲ್ಲಿ ಪ್ರಯಾಣಿಕ ವಿಮಾನಗಳು 2020ರ ಜುಲೈನಿಂದ ಸುಮಾರು 45 ದೇಶಗಳ ನಡುವೆ ಸಂಚರಿಸಿವೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಇಂದು ಹೊರಡಿಸಿರುವ ಹೊಸ ಸುತ್ತೋಲೆಯಲ್ಲಿ ಮುಂದಿನ ಆದೇಶದವರೆಗೆ ಭಾರತಕ್ಕೆ ಬರುವ ಹಾಗೂ ಭಾರತದಿಂದ ಹೊರ ಹೋಗುವ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳ ಸೇವೆ ಅಮಾನತನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.
ನಿರ್ದಿಷ್ಟವಾಗಿ ಅನುಮೋದಿಸಲ್ಪಟ್ಟ ಅಂತಾರಾಷ್ಟ್ರೀಯ ಎಲ್ಲಾ-ಸರಕು ಕಾರ್ಯಾಚರಣೆಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 2021ರ ಡಿಸೆಂಬರ್ 15ರಿಂದ ಭಾರತವು ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳನ್ನು ಪುನರಾರಂಭಿಸುತ್ತದೆ ಎಂದು ಡಿಜಿಸಿಎ 2021ರ ನವೆಂಬರ್ 26ರಂದು ಘೋಷಿಸಿತು.
ಆದರೆ, ಅದೇ ವೇಳೆ ಕೊರೋನಾ ರೂಪಾಂತರಿ ಓಮಿಕ್ರಾನ್ ಸೇರಿದಂತೆ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ವಿಮಾನ ಯಾನ ಸೇವೆ ಪುನರಾರಂಭದ ಬಗ್ಗೆ ಪರಿಶೀಲಿಸುವಂತೆ ಡಿಜಿಸಿಎ ಪ್ರಧಾನಿ ಅವರಲ್ಲಿ ಮನವಿ ಮಾಡಿತ್ತು.
ಹೀಗಾಗ 2021ರ ಡಿಸೆಂಬರ್ 1 ರಂದು ಹಿಂದಿನ ಆದೇಶವನ್ನು ಹಿಂಪಡೆಯಲಾಯಿತು. ದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದರೂ, ಹಲವು ದೇಶಗಳಲ್ಲಿ ಸೋಂಕು ಹೆಚ್ಚಿದೆ. ಹೀಗಾಗಿ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಅಮಾನತು ಎಷ್ಟು ಸಮಯದವರೆಗೆ ಮುಂದುವರಿಯುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
