ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ : ಪೊಲೀಸರಿಗೆ ಡಿಜಿ ವೀಣ್ ಸೂದ್ ಆದೇಶ

Social Share

ಬೆಂಗಳೂರು,ಅ.31- ಮುಂದಿನ ಆರು ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಹಳ ಎಚ್ಚರಿಕೆ ಹಾಗೂ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರು ಅಧಿಕಾರಿ ಮತ್ತು ಸಿಬ್ಬಂದಿಗೆ ಆದೇಶಿಸಿದ್ದಾರೆ.

ಕೋರಮಂಗಲದ ಕೆಎಸ್ಆರ್ಪಿ ಕವಾಯತು ಮೈದಾನದಲ್ಲಿ ಇಂದು ಸೇವಾ ಕವಾಯತುವಿನಲ್ಲಿ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.ಗಣ್ಯ ವ್ಯಕ್ತಿಗಳ ಭದ್ರತೆ ಹಾಗೂ ಗಣೇಶ, ದಸರಾ ಹಬ್ಬಗಳ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಮಾಡಿ ಒಳ್ಳೆಯ ಕೆಲಸ ನಿರ್ವಹಿಸಿದ್ದೀರಿ. ವಿಐಪಿಗಳು ನಗರಕ್ಕೆ ಆಗಮಿಸಿದಾಗ ಉತ್ತಮ ಭದ್ರತೆ ಒದಗಿಸಿ ಕರ್ತವ್ಯ ನಿಭಾಯಿಸಿದ್ದೀರಿ. ಅದಕ್ಕಾಗಿ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.

ಕೇಂದ್ರ ಸರ್ಕಾರ ಇತ್ತೀಚೆಗೆ ಪಿಎಫ್ಐ ಸಂಘಟನೆ ನಿಷೇಧಿಸಿದಾಗ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಡದಂತೆ ಬಹಳ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿದ್ದೀರಿ. ಮುಂದೆಯೂ ಸಹ ಇದೇ ರೀತಿ ಕರ್ತವ್ಯದಲ್ಲಿ ತೊಡಗಿಕೊಳ್ಳುವಂತೆ ಸಿಬ್ಬಂದಿಗೆ ಅವರು ಸಲಹೆ ನೀಡಿದರು.

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪತಿ-ಪತ್ನಿ ಒಂದೇ ಜಿಲ್ಲೆಯಲ್ಲಿ ಅಥವಾ ಒಂದೇ ಘಟಕದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದ್ದು, ಪೊಲೀಸರಿಗೆ ಸಹಕರಿಸಿ ಎಂದರು.ಈಗಾಗಲೇ ಪೊಲೀಸ್ ಸಿಬ್ಬಂದಿಗಳಿಗೆ 10 ಸಾವಿರ ಮನೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದ್ದು, ಎರಡು ಸಾವಿರ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಅಲ್ಲದೆ 116 ಪೊಲೀಸ್ ಠಾಣೆಗಳ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.

2023ರ ಅಂತ್ಯದ ವೇಳೆಗೆ ಬಾಡಿಗೆ ಕಟ್ಟಡದಲ್ಲಿ ಪೊಲೀಸ್ ಠಾಣೆ ಕರ್ತವ್ಯ ನಿರ್ವಹಿಸಲು ಮುಕ್ತಿ ನೀಡಿ, ಸ್ವಂತ ಕಟ್ಟಡದಲ್ಲಿ ಕೆಲಸ ನಿರ್ವಹಿಸಲಾಗುತ್ತದೆ ಎಂದರು. ಕೋರಮಂಗಲ 3ನೇ ಬೆಟಾಲಿಯನ್ ಬಳಿ 20 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದೆ ಎಂದರು. ವಿವಿಧ ಕಡೆ ತರಬೇತಿ ಕೊನೆ ಹಂತದಲ್ಲಿದೆ. ಸದ್ಯದಲ್ಲಿಯೇ 6 ಸಾವಿರ ಮಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಹಳೆ ವೆಪೆನ್ಸ್ಗಳ ವಿಲೇವಾರಿ:

70-80 ವರ್ಷಗಳ ವೆಪೆನ್ಸ್ಗಳನ್ನು ವಿಲೇವಾರಿ ಮಾಡಿ ಸರ್ಕಾರಕ್ಕೆ ಹಣ ಜಮಾ ಮಾಡಲಾಗಿದೆ. ಪೊಲೀಸ್ ಇಲಾಖೆಗೆ 78 ಕೋಟಿ ವೆಚ್ಚದಲ್ಲಿ ವಾಹನಗಳನ್ನು ಖರೀದಿಸಲಾಗುತ್ತದೆ. 15 ವರ್ಷದ ಹಳೆಯ ವಾಹನಗಳ ಬಳಕೆ ಮಾಡಬಾರದೆಂಬ ಉದ್ದೇಶದಿಂದ ಹೊಸ ವಾಹನಗಳ ಖರೀದಿಗೆ ಮುಂದಾಗಿದ್ದೇವೆ ಎಂದರು.

ಪ್ರಮುಖವಾಗಿ ಜೀಪು, ಮೋಟಾರ್ ಸೈಕಲ್ಗಳನ್ನು ಖರೀದಿ ಮಾಡಿ ಸಿಬ್ಬಂದಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಪೊಲೀಸ್ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಸಣ್ಣಪುಟ್ಟ ಅವಶ್ಯಕತೆಗಳನ್ನು ಸಹ ಪೂರೈಸಲಾಗುತ್ತಿದೆ. ಸಿಬ್ಬಂದಿಗಳ ತಮ್ಮ ಮೆಡಿಕಲ್ ಅಲೆಯನ್ಸ್, ಪೆಟ್ರೋಲ್ ಸೇರಿದಂತೆ ಯಾವುದೇ ಅವಶ್ಯಕತೆಯಿದ್ದರೂ ಘಟಕಾಧಿಕಾರಿಗಳಿಗೆ ನೇರವಾಗಿ ಸಂಪರ್ಕಿಸಿ ನೆರವು ಪಡೆಯಬಹುದು ಎಂದು ತಿಳಿಸಿದರು.

ಕೆಎಸ್ಆರ್ಪಿ ಕಾನ್ಸ್ಟೆಬಲ್ಗಳನ್ನು ಸಿವಿಲ್ಗೆ ಸೇರಿಸಿಕೊಳ್ಳಲು ಕಳೆದ 20 ವರ್ಷದಿಂದ ಬೇಡಿಕೆಯಿದ್ದು, ಕಳೆದ ವರ್ಷ ಪ್ರಾಯೋಗಿಕವಾಗಿ ಮಾಡಿದ್ದೆವು. ಆದರೆ, ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿಲ್ಲ. ಮುಂದೆ ಬರಲಿದೆ ಎಂದು ಪ್ರವೀಣ್ ಸೂದ್ ಹೇಳಿದರು.

Articles You Might Like

Share This Article