ಸ್ನೇಹಿತೆಯರ ಖುಷಿ ಕಿತ್ತುಕೊಂಡು ಮಸಣಕ್ಕಟ್ಟಿದ ಕರುಣೆಯಿಲ್ಲದ ಜವರಾಯ..!

ಧಾರವಾಡ,ಜ.15- ದಾಣಗೆರೆಯಿಂದ ಗೋವಾಕ್ಕೆ ಪ್ರವಾಸ ತೆರಳುತ್ತಿದ್ದ ಟೆಂಪೋ ಟ್ರಾವೆಲರ್‍ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ 9 ಮಹಿಳೆಯರು ಸೇರಿದಂತೆ 13 ಮಂದಿ ಮೃತಪಟ್ಟು, 5 ಮಂದಿ ಗಂಭೀರ ಗಾಯಗೊಂಡಿರುವ ದಾರುಣ ಘಟನೆ ಧಾರವಾಡ ಹೊರವಲಯದ ಇಟಿಗಟ್ಟಿ ಬೈಪಾಸ್ ಬಳಿ ಇಂದು ಬೆಳಗಿನ ಜಾವ ಸಂಭವಿಸಿದೆ. ಮೃತಪಟ್ಟವರನ್ನು ದಾವಣಗೆರೆ ವಿದ್ಯಾನಗರ ಎಂಸಿಸಿ ಎ ಬ್ಲಾಕ್ ಮತ್ತು ಬಿ ಬ್ಲಾಕ್ ನಿವಾಸಿ ಗಳಾಗಿದ್ದು, ಮೃತರಲ್ಲಿ ಜಗಳೂರಿನ ಮಾಜಿ ಶಾಸಕ ಗುರುಸಿದ್ದೇಗೌಡರ ಸೊಸೆ, ಆರೈಕೆ ಆಸ್ಪತ್ರೆಯ ಡಾ.ರವಿಕುಮಾರ್ ಅವರ ಪತ್ನಿ ಡಾ.ಪ್ರೀತಿ, ಸ್ತ್ರೀರೋಗ ತಜ್ಞಾ ಡಾ.ವೀಣಾ ಪ್ರಕಾಶ್ ಸೇರಿದಂತೆ ಆಶಾ, ಮೀರಾಬಾಯಿ, ರಾಜೇಶ್ವರಿ, ಶಕುಂತಲಾ, ಉಷಾ, ವೇದಾ, ಮಂಜುಳ, ನಿರ್ಮಲ, ರಜನಿ, ಸ್ವಾತಿ ಹಾಗೂ ಟೆಂಪೋ ಚಾಲಕ ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ.

ಟೆಂಪೋ ಟ್ರಾವೆಲರ್‍ನಲ್ಲಿದ್ದ 15 ಮಂದಿ ಮಹಿಳೆಯರು ಬಾಲ್ಯ ಸ್ನೇಹಿತರಾಗಿದ್ದು ತಮ್ಮದೇ ಆದ ಕ್ಲಬ್ ಸ್ಥಾಪಿಸಿಕೊಂಡಿದ್ದರು. ಪ್ರತಿ ವರ್ಷ ಸಂಕ್ರಾಂತಿ ದಿನದಂದು ಪ್ರವಾಸ ಕೈಗೊಳ್ಳುವ ಪರಿಪಾಠವಿಟ್ಟುಕೊಂಡಿದ್ದರು.  ಇವರೆಲ್ಲರೂ ಪ್ರತಿಷ್ಠಿತ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಗೋವಾದಲ್ಲಿ ಸಂತೋಷ ಕೂಟ ಆಚರಿಸಲೆಂದು ಟೆಂಪೋ ಟ್ರಾವೆಲರ್‍ನಲ್ಲಿ ತೆರಳುತ್ತಿದ್ದಾಗ ಹುಬ್ಬಳ್ಳಿ- ಧಾರವಾಡ ಬೈಪಾಸ್‍ನ ಇಟಿಗಟ್ಟಿ ಗ್ರಾಮದ ಸಮೀಪ ಎದುರಿನಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಗುರುತು ಪತ್ತೆಯಾಗದಷ್ಟು ಎಲ್ಲರ ಮೃತದೇಹಗಳು ನಜ್ಜುಗುಜ್ಜಾಗಿರುವುದು ಅಪಘಾತದ ಭೀಕರತೆಯನ್ನು ಸಾರಿ ಹೇಳುತ್ತದೆ. ಇವರೆಲ್ಲರೂ ಪ್ರವಾಸಕ್ಕೆ ತೆರಳುವ ಮುನ್ನ ಸೆಲ್ಫೀ ಕೂಡ ತೆಗೆದುಕೊಂಡಿದ್ದರು. ಇದೇ ಅವರ ಕೊನೆ ಸೆಲ್ಫೀಯಾಗಿತ್ತು. ದಾವಣಗೆರೆಯಿಂದ ನಸುಕಿನ ವೇಳೆ ಹೊರಟಿದ್ದ ಇವರುಗಳು ಧಾರವಾಡದ ಪರಿಚಯಸ್ಥರ ಮನೆಗೆ ಉಪಹಾರಕ್ಕೆಂದು ತೆರಳುವವರಿದ್ದರು.

ಆದರೆ ವಿಧಿಯಾಟವೇ ಬೇರೆಯಾಗಿತ್ತು. ಟಿಪ್ಪರ್ ಲಾರಿ ರೂಪದಲ್ಲಿ ಬಂದ ಜವರಾಯ ಇವರೆಲ್ಲರನ್ನೂ ಬಲಿತೆಗೆದುಕೊಂಡಿದ್ದಾನೆ. ಇನ್ನು ಘಟನೆಯಿಂದಾಗಿ ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್‍ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಒಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸಪಟ್ಟರು.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಸಬ್ ಇನ್ಸ್‍ಪೆಕ್ಟರ್ ಮಹೇಂದ್ರಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.