ಡಿಜಿಟಲ್ ಪರಿವರ್ತನೆ ಮಹಿಳಾ ಉದ್ಯಮಿಗಳಿಗೆ ಹೊಸ ದಾರಿ: ಬೊಮ್ಮಾಯಿ

Social Share

ಬೆಂಗಳೂರು,ಆ.2- ದೇವರು ಎಲ್ಲವನ್ನೂ ಸೃಷ್ಟಿಸಲು ಸಾಧ್ಯವಿಲ್ಲವೆಂದು, ಮಹಿಳೆಯರನ್ನು ಸೃಷ್ಟಿಸಿದ. ಜೊತೆಯಲ್ಲಿ ಮಹಿಳೆಯರಿಗೆ ಸೃಷ್ಟಿಸುವ ಪರಮಾಧಿಕಾರವನ್ನು ದೇವರು ನೀಡಿದ್ದಾನೆ, ಮಹಿಳೆಯರು ಏನು ಬೇಕಾದರೂ ಸೃಷ್ಟಿಸುವ ಶಕ್ತಿ ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸ್ವಸಹಾಯ ಸಂಘದ ಮೂಲಕ ಇಂದು ರಾಜ್ಯದ ಮಹಿಳೆಯರು ಬೆಳೆಸುತ್ತಿರುವ ಕಿರು ಉದ್ದಿಮೆಗಳಿಗೆ ಡಿಜಿಟಲ್ ತರಬೇತಿ ನೀಡುವ ಮೂಲಕ ಮಾರುಕಟ್ಟೆ ವ್ಯವಸ್ಥೆಯನ್ನು ಜಾಗತಿಕ ವಿಸ್ತರಿಸುವ ಕಾರ್ಯವನ್ನು UBUNTU & UNESCAP ಮಾಡುತ್ತಿದೆ ಎಂದು ತಿಳಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ UBUNTU & UNESCAP ಸಹಯೋಗದಲ್ಲಿ ಹಮ್ಮಿಕೊಂಡಿರುವ ಡಿಜಿಟಲ್ ಪರಿವರ್ತನೆ ಮಹಿಳಾ ಉದ್ಯಮಿಗಳಿಗೆ ಹೊಸ ದಾರಿ ಕಾರ್ಯಕ್ರಮದಡಿ 10,000 ಮಹಿಳೆಯರಿಗೆ ಡಿಜಿಟಲ್ ಮಾರ್ಕೆಟಿಂಗ್ ಕುರಿತು ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಜನಸಂಖ್ಯೆಯಲ್ಲಿ ಪುರುಷರಷ್ಟೆ ಸರಿಸಮಾನರಾಗಿರುವ ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ, ಅವರಿಗೆ ಇಂತಹ ತರಬೇತಿಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುವುದು ನಮ್ಮ ಜವಬ್ಧಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಲ್ಲಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಇಂದು ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆ ದೈತ್ಯವಾಗಿ ಬೆಳೆಯುತ್ತಿದ್ದು, ಗ್ರಾಮೀಣ ಭಾಗದ ಕರಕುಶಲ ಮತ್ತು ಸಣ್ಣ ಉದ್ದಿಮೆಗಳಿಗೆ ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆಯ ತರಬೇತಿ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದ ಅಭಿವೃದ್ಧಿಗೆ ಮಹಿಳೆಯರು ಇಂಜಿನ್ ಇದ್ದಂತೆ ಎಂಬುದನ್ನು ಮನಗಂಡು ರಾಜ್ಯದಲ್ಲಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಈಗಾಗಲೇ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಮಹಿಳಾ ಸ್ವಸಹಾಯ ಸಂಘಗಳನ್ನು ಪ್ರೋತ್ಸಾಹಿಸಲು ಹೊಸದಾಗಿ ರಾಜ್ಯದ 33,000 ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ಮತ್ತು ಮಾರುಕಟ್ಟೆ ವಿಸ್ತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರತಿ ಹಳ್ಳಿಯಲ್ಲೊಂದು ಪ್ರಬಲ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿಯಾಡಲಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ UBUNTU ಸಂಸ್ಥಾಪಕ ಅಧ್ಯಕ್ಷರಾದ ಕೆ.ರತ್ನಪ್ರಭಾ ಮಾತನಾಡಿ, ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಇ-ಕಾಮರ್ಸ್ ಪ್ರಬಲ ಸಾಧನವಾಗಿದೆ. ಇದು ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಲಾಭವನ್ನು ತರಬಹುದು.

ಇದು ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಸವಾಲುಗಳನ್ನು ಜಯಿಸಲು ಮತ್ತು ಜಾಗತಿಕ ಮತ್ತು ಪ್ರಾದೇಶಿಕ ಮಾರುಕಟ್ಟೆಗಳನ್ನು ಅನ್ವೇಷಿಸಲು ಒಂದು ದೊಡ್ಡ ಅವಕಾಶವನ್ನು ಒದಗಿಸಿದೆ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಡಿಜಿಟಲ್ ಇಂಡಿಯಾ ಆಶಯಕ್ಕೆ ಅನುಗುಣವಾಗಿದೆ ಎಂದರು.

ಈ ಕಾರ್ಯಕ್ರಮದಡಿಯಲ್ಲಿ 10,000 ಮಹಿಳೆಯರಿಗೆ ಡಿಜಿಟಲ್ ಮಾರ್ಕೆಟಿಂಗ್ ಕುರಿತು ತರಬೇತಿ ನೀಡಲಾಗುತ್ತದೆ. ವರ್ಚುವಲ್ ತರಬೇತಿಯು ಡಿಜಿಟಲ್ ಮಾರ್ಕೆಟಿಂಗ್ ಪರಿಕರಗಳ ಪರಿಚಯವನ್ನು ಒದಗಿಸುವ ಗುರಿಯನ್ನು ಹೊಂದಿದೆ.

Articles You Might Like

Share This Article