ಭಾರತ್ ಐಕ್ಯಾತಾ ಯಾತ್ರೆಯಿಂದ ದೇಶದಲ್ಲಿ ಬದಲಾವಣೆಯಾಗಲಿದೆ : ದಿಗ್ವಿಜಯ್ ಸಿಂಗ್

Social Share

ಬೆಂಗಳೂರು, ಸೆ.1- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ನೇತೃತ್ವದಲ್ಲಿ ನಡೆಯುವ ಭಾರತ ಐಕ್ಯತಾ ಯಾತ್ರೆ ಪೂರ್ವ ಸಿದ್ಧತೆ ಕುರಿತು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ಹೈಕಮಾಂಡ್ ನಾಯಕರು ರಾಜ್ಯದ ಕಾಂಗ್ರೆಸ್ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು.

ಸಭೆಯಲ್ಲಿ ಯಾತ್ರೆಯ ರಾಷ್ಟ್ರೀಯ ಸಮಿತಿ ಅಧ್ಯಕ್ಷ ದಿಗ್ವಿಜಯಸಿಂಗ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್, ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ಯು.ಟಿ.ಖಾದರ್, ಅಲ್ಲಂ ವೀರಭದ್ರಪ್ಪ, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಚಲುವರಾಯಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ದಿಗ್ವಿಜಯ್ ಸಿಂಗ್, ಭಾರತ್ ಜೊಡೋ ಯಾತ್ರೆ ಬಹುದೊಡ್ಡ ರಾಜಕೀಯ ಕಾರ್ಯಕ್ರಮವಾಗಿದೆ.ರಾಹುಲ್ ಗಾಂ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ನಡೆಯಲಿದೆ. ಸಿದ್ಧಾಂತಗಳ ಮೇಲೆ, ಸರ್ವಧರ್ಮ ಸಹಬಾಳ್ವೆ ನಮ್ಮ ಪಕ್ಷದ ಸಿದ್ಧಾಂತ ಮುಂದಿಟ್ಟುಕೊಂಡೇ ಯಾತ್ರೆ ನಡೆಯಲಿದೆ ಎಂದರು.

ಭ್ರಷ್ಟಾಚಾರ, ಜಿಎಸ್ ಟಿ,ನಿರುದ್ಯೋಗ, ಬಡತನ ಇವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಬಿಜೆಪಿ ದೇಶದ ಜನರನ್ನ ವಿಭಜಿಸುತ್ತಿದೆ, ಕಾಂಗ್ರೆಸ ಒಂದು ಗೂಡಿಸುವ ಪ್ರಯತ್ನ ಮಾಡುತ್ತೇವೆ. ಬಿಜೆಪಿ ಕೋಮುಭಾವನೆಗಳ ಆಧಾರದ ಮೇಲೆ ಧರ್ಮರಾಜಕಾರಣ ಮಾಡುತ್ತಿದೆ. ನಮ್ಮದು ಸರ್ವರನ್ನೊಳಗೊಂಡ ಅಭಿವೃದ್ಧಿ ಸಿದ್ಧಾಂತ. ಈ ಮೂರು ಸ್ಥರಗಳಲ್ಲಿ ಯಾತ್ರೆ ನಡೆಯಲಿದೆ ಎಂದರು.

ಕರ್ನಾಟಕದಲ್ಲಿ 21 ದಿನ ಕಾಲ ಪಾದಯಾತ್ರೆ ನಡೆಯಲಿದೆ. ರಾಹುಲ್ ಗಾಂ ಜೊತೆ ಎಲ್ಲರೂ ಹೆಜ್ಜೆ ಹಾಕಲಿದ್ದಾರೆ. ಸಾವಿರಾರು ಜನ ಇದರಲ್ಲಿ ಪಾಲ್ಗೊಳ್ಳಬಹುದು. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದೆ, ಈ ಯಾತ್ರೆ ಎಲ್ಲರನ್ನೂ ತಲುಪಲಿದೆ. ಹಳ್ಳಿ,ಗ್ರಾಮ,ತಾಂಡ,ಕೇರಿ ಎಲ್ಲವನ್ನೂ ಸುತ್ತಲಿದೆ.

ಪ್ರತಿದಿನ 7 ಗಂಟೆಗೆ ಪಾದಯಾತ್ರೆ ನಡೆಯಲಿದ್ದು, ಮಧ್ಯಾಹ್ನ ಬಿಡುವಿನ ವೇಳೆಯಲ್ಲಿ 2 ಗಂಟೆ ವೇಳೆಗೆ ರಾಹುಲ್ ವಿಭಿನ್ನ ಕ್ಷೇತ್ರಗಳ ಜನರ ಜೊತೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 3.30 ಗೆ ಪಾದಯಾತ್ರೆ ಮುಂದುವರಿಯಲಿದೆ. ಮತ್ತೆ ಜನರ ಜೊತೆ ರಾಹುಲ್ ಮಾತುಕತೆ ನಡೆಯಲಿದೆ. ಅದರಲ್ಲಿ ಹಿಂದೂ,ಮುಸ್ಲಿಂ ಸೇರಿದಂತೆ ಇನ್ನಿತರ ಸಮುದಾಯದವರು ಭಾಗಿಯಾಗಲಿದ್ದಾರೆ. ರೈತರ ಜೊತೆಯೂ ಚರ್ಚೆ ನಡೆಸಲಿದ್ದಾರೆ ಎಂದರು.

ಕರ್ನಾಟಕ, ತಮಿಳುನಾಡು,ಆಂಧ್ರ ಪ್ರದೇಶ,ಕೇರಳ,ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ಭಾರೀ ಬೆಂಬಲ ವ್ಯಕ್ತವಾಗಲಿದೆ. ಈ ಯಾತ್ರೆ ಇಡೀ ದೇಶವನ್ನೇ ಬದಲಾವಣೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ಮಾತನಾಡಿ, ಮೇ 16 ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನ್ ಶಿವರ್‍ನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂ ಅವರು ಭಾರತ್ ಜೊಡೋ ಯಾತ್ರೆಯನ್ನು ಘೋಷಣೆ ಮಾಡಿದರು.

ಇದಕ್ಕೂ ಮೊದಲು 1942 ರಲ್ಲಿ ಭಾರತ್ ಚೋಡೋ ನಡೆದಿತ್ತು. ಇದೀಗ ಸ್ವತಂತ್ರ ಭಾರತದಲ್ಲಿ ಯಾತ್ರೆ ನಡೆಸುವ ಪರಿಸ್ಥಿತಿ ಬಂದಿದೆ ಎಂದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ರಾಜ್ಯಗಳ ಹಲವು ಮಾರ್ಗಗಳಲ್ಲಿ 3570 ಕಿ.ಮೀ ದೂರ ಈ ಯಾತ್ರೆ ನಡೆಯಲಿದೆ.

ಸೆಪ್ಟಂಬರ್ 7 ರಂದು ಪ್ರಾರಂಭವಾಗಿ, ತಮಿಳುನಾಡಿನಲ್ಲಿ 3 ದಿನ,ಕೇರಳದಲ್ಲಿ 18 ದಿನ, ಕರ್ನಾಟಕದಲ್ಲಿ 21 ದಿನ, ತೆಲಂಗಾಣದಲ್ಲಿ 21 ದಿನ, ಆಂಧ್ರ ಪ್ರದೇಶದಲ್ಲಿ 3 ದಿನ, ಮಹಾರಾಷ್ಟ್ರದಲ್ಲಿ 16 ದಿನ, ಮಧ್ಯಪ್ರದೇಶದಲ್ಲಿ 16 ದಿನ,ರಾಜಸ್ತಾನದಲ್ಲಿ 21 ದಿನ, ಉತ್ತರಪ್ರದೇಶದಲ್ಲಿ 3 ದಿನ, ಹರ್ಯಾಣದಲ್ಲಿ 2 ದಿನ, ಜಮ್ಮುಕಾಶ್ಮೀರದಲ್ಲಿ 2 ದಿನ ಈ ಪಾದಯಾತ್ರೆ ಸಾಗಲಿದೆ.

ಗುಜರಾತ್,ಹಿಮಾಚಲ ಪ್ರದೇಶದಲ್ಲಿ ಯಾತ್ರೆ ನಡೆಯುವುದಿಲ್ಲ ಎಂದರು. ಪಕ್ಷದಲ್ಲಿ ಕೆಲವರು ಮಾತನಾಡುವವರು ಇದ್ದಾರೆ, ಅವರು ಮಾತನಾಡಿಕೊಂಡೇ ಇರಲಿ. ಕೆಲವರು ಹೋಗುವವರು ಇದ್ದಾರೆ ಹೋಗಲಿ. ಯಾರೇ ಹೋದರು ಈ ಯಾತ್ರೆ ಯಶಸ್ವಿಯಾಗಲಿದೆ ಎಂದು ನಿರ್ಗಮಿತ ನಾಯಕ ಗುಲಾಂ ನಬಿ ಅಜಾದ್ ಕುರಿತು ಜೈರಾಂ ರಮೇಶ್ ಪರೋಕ್ಷ ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ತಂತ್ರಜ್ಞಾನ ಬೆಳೆಯಬೇಕು, ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎಂದು ರಾಜೀವ್ ಗಾಂಯವರು ಬಯಸಿದ್ದರು. ಪ್ರಧಾನಿ ನರೇಂದ್ರ ಮೋದಿ ಇವತ್ತು ಇವನ್ನೆಲ್ಲ ಮಾರಿಕೊಂಡು ತಿನ್ನುತ್ತಿದ್ದಾರೆ. ಗೋದಿ,ಬೆಲ್ಲ ಮಾರಾಟ ಮಾಡುತ್ತಿದ್ದ ಗೌತಮ್ ಅದಾನಿ ಇಂದು ಜಗತ್ತಿನ ಮೂರನೇ ಶ್ರೀಮಂತನಾಗಿದ್ದಾನೆ. ಇದೇ ಮೋದಿ ಆತನಿಗೆ ಸಹಾಯ ಮಾಡಿದ್ದು ಎಂದು ಹೇಳಿದರು.

ದೇಶದ ಸಮಸ್ಯೆಗಳು ಗಂಭೀರವಾಗಿವೆ. ಅವುಗಳ ವಿರುದ್ಧ ಜನ ಒಂದಾಗಬೇಕಿದೆ. ಅದಕ್ಕಾಗಿ ಈ ಯಾತ್ರೆಯಲ್ಲಿ ಎಲ್ಲರೂ ಭಾಗಿಯಾಗಬೇಕು. ಲೋಕತಂತ್ರ,ಪ್ರಜಾತಂತ್ರ ಉಳಿವಿಗಾಗಿ ಭಾಗವಹಿಸಬೇಕಿದೆ. ಈ ಪಾದಯಾತ್ರೆಯಿಂದ ಪಕ್ಷಕ್ಕೇನು ಲಾಭವಿಲ್ಲ, ದೇಶದ ಉಳಿವಿಗಾಗಿ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಹೇಳಿದರು.

ಹಲವು ಮಹನೀಯರು ಈ ದೇಶ ಕಟ್ಟಿದ್ದಾರೆ, ಅವರ ಕನಸನ್ನು ಕಸಿಯುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ. ಚುನಾವಣೆಗಾಗಿ ಈ ಪಾದಯಾತ್ರೆ ಎಂದು ಟೀಕಿಸಲಾಗುತ್ತಿದೆ. ಆದರೆ ಈ ಯಾತ್ರೆ ರಾಜಕೀಯಕ್ಕಾಗಿ ಅಲ್ಲ, ದೇಶದ ಉಳಿವಿಗಾಗಿ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣ ಹತ್ತಿಕ್ಕಲಿಕ್ಕಾಗಿ ಎಂದು ಹೇಳಿದರು.

ಕ್ವಿಟ್ ಇಂಡಿಯಾ ಚಳುವಳಿ ವಿರುದ್ಧ ಹೋರಾಡಿದವರು, ಬ್ರಿಟೀಷರ ಜೊತೆ ಸೇರಿದವರನ್ನ ಹೊಗಳಲಾಗುತ್ತಿದೆ ಎಂದು ಸಾರ್ವಕರ್ ವಿಚಾರ ಕುರಿತು ಆಕ್ರೋಶ ವ್ಯಕ್ತ ಪಡಿಸಿದ ಖರ್ಗೆ, ಕೊಡುಗೆಯಿಲ್ಲದವರನ್ನ ನೆನಪಿಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು.

Articles You Might Like

Share This Article