ಶ್ರೀಲಂಕದಲ್ಲಿ ಬಿರುಸುಗೊಂಡ ರಾಜಕೀಯ: ಪ್ರತಿಭಟನೆ ಹತ್ತಿಕ್ಕಲು ಸೇನೆ ಬಳಕೆ

Social Share

ಕೊಲಂಬೊ, ಜು.22- ಶ್ರೀಲಂಕಾದ ನೂತನ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಹಿರಿಯ ರಾಜಕಾರಣಿ ಹಾಗೂ ಮಾಜಿ ಗೃಹ ಸಚಿವ ದಿನೇಶ್ ಗುಣವರ್ಧನೆ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದು, ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಜೊತೆಯಲ್ಲಿ ಸಚಿವ ಸಂಪುಟದ ಸದಸ್ಯರು ಪ್ರತಿಜ್ಞಾವಿಧಿ ಸ್ವೀಕರಿಸಿ ಕೆಲಸ ಆರಂಭಿಸಿದ್ದಾರೆ.

ಭೀಕರ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿರುವ ಶ್ರೀಲಂಕದಲ್ಲಿ ಏಪ್ರಿಲ್‍ನಿಂದಲೂ ಪ್ರತಿಭಟನೆಗಳು ನಡೆಯುತ್ತಿವೆ. ಕಳೆದ 15 ದಿನಗಳ ಹಿಂದೆ ಪ್ರತಿಭಟನೆಗಳು ಉಗ್ರ ಸ್ವರೂಪಕ್ಕೆ ತಿರುಗಿದಾಗ ಹೆದರಿದ ಅಧ್ಯಕ್ಷ ಗೋಟಬಯ ರಾಜಪಕ್ಷೆ ದೇಶ ಬಿಟ್ಟು ಪರಾರಿಯಾಗಿದ್ದರು, ಜುಲೈ 14ರಂದು ವಿದೇಶದಿಂದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಜುಲೈ 21ರಂದು ನಡೆದ ಸಂಸತ್ ಅಧಿವೇಶನದಲ್ಲಿ 134 ಸಂಸದರ ಬೆಂಬಲ ಪಡೆದ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈಗ ಸಿಂಘೆಯಿಂದ ತೆರವಾಗಿರುವ ಪ್ರಧಾನಿ ಸ್ಥಾನಕ್ಕೆ ಶ್ರೀಲಂಕಾ ಪೊಡುಜನ ಪೆರಮುನ ಪಕ್ಷದ 73 ವರ್ಷದ ಹಿರಿಯ ರಾಜಕಾರಣಿ ದಿನೇಶ್ ಗುಣವರ್ಧನೆ ನೇಮಕವಾಗಿದ್ದಾರೆ. 15 ನೇ ಪ್ರಧಾನಿ ಪ್ರಧಾನಿಯಾಗಿರುವ ದಿನೇಶ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಕಳೆದ ಏಪ್ರಿಲ್‍ನಲ್ಲಿ ಗೃಹ ಸಚಿವರಾಗಿದ್ದ ದಿನೇಶ್, ಅದಕ್ಕು ಮೊದಲು ವಿದೇಶಾಂಗ, ಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನೂತನ ಸರ್ಕಾರದಲ್ಲಿ ಹೊಸ ಸಚಿವರ ನೇಮಕಕ್ಕೆ ಸರ್ವ ಪಕ್ಷಗಳ ಜೊತೆ ಸಮಾಲೋಚನೆ ನಡೆಯುತ್ತಿದೆ. ಆದರೆ ಸದ್ಯಕ್ಕೆ ಕೇಂದ್ರ ಸಂಪುಟದಿಂದ ಅನುಮತಿ ಪಡೆಯಬೇಕಾದ ಕಡತಗಳು ಸಾಕಷ್ಟು ಬಾಕಿ ಉಳಿದಿದ್ದು, ಹೊಸ ಸಂಪುಟ ರಚನೆ ವಿಳಂಬವಾಗಲಿದೆ ಎಂಬ ಕಾರಣಕ್ಕೆ ಹಿಂದಿನ ಅಧ್ಯಕ್ಷ ಗೋಟಬಯ ರಾಜಪಕ್ಷೆ ಅವರ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿದ್ದವರೆ ಇಂದು ಪ್ರಮಾನ ವಚನ ಸ್ವೀಕರಿಸಿ, ಕೆಲಸ ಶುರು ಮಾಡಿದ್ದಾರೆ.

ಜುಲೈ 27ರಂದು ಸಂಸತ್ ಅಧಿವೇಶನ ಸಮಾವೇಶಗೊಳ್ಳಲಿದ್ದು, ಹೊಸ ಸರ್ಕಾರ ರಚನೆಯ ಪ್ರಸ್ತಾವನೆ ಕುರಿತು ಚರ್ಚೆ ನಡೆಸಲಿದೆ. ಬಳಿಕ ಸಂಪುಟಕ್ಕೆ ನೂತನ ಸಚಿವರ ನೇಮಕವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀಲಂಕದ ಎಂಟನೆ ಅಧ್ಯಕ್ಷರಾಗಿರುವ ಸಿಂಘೆ 2024 ರ ನವೆಂಬರ್‍ವರೆಗೂ ರಾಜಪಕ್ಸೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಆರು ಬಾರಿ ಪ್ರಧಾನಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರುವ 73 ವರ್ಷದ ಅಧ್ಯಕ್ಷ ವಿಕ್ರಮ ಸಿಂಘೆ, ದೇಶ ಹೆದರಿಸುತ್ತಿರುವ ಸಂಕಷ್ಟಗಳ ಪರಿಹಾರಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದ್ದಾರೆ.

ಸಂಸತ್ ಸದಸ್ಯರಿಂದ ಚುನಾಯಿತರಾಗಿದ್ದರು ಅವರ ವಿರುದ್ಧ ಇನ್ನೂ ಪ್ರತಿಭಟನೆಗಳು ಮುಂದುರೆದಿವೆ. ಆದರೆ ಪ್ರತಿಭಟನಾಕಾರರಲ್ಲೇ ಭಿನ್ನ ಅಭಿಪ್ರಾಯಗಳು ತಲೆದೋರಿವೆ. ಏಪ್ರಿಲ್‍ನಿಂದ ಪ್ರಧಾನಿಯವರ ಅಧಿಕೃತ ನಿವಾಸದ ಎದುರು ಮೊಕ್ಕಾಂ ಹೂಡಿದ್ದ ಪ್ರತಿಭಟನಾಕಾರರ ಪೈಕಿ ಒಂದು ಗುಂಪು, ಪ್ರತಿಭಟನೆಯನ್ನು ಅಂತ್ಯಗೊಳಿಸುತ್ತಿರುವುದಾಗಿ ಘೋಷಿಸಿದೆ.

ನಾವು ಸಂವಿಧಾನವನ್ನು ಗೌರವಿಸಬೇಕು ಹಾಗಾಗಿ ಪ್ರತಿಭಟನೆಯನ್ನು ನಿಲ್ಲಿಸುವ ಚರ್ಚೆಗಳು ನಡೆದಿವೆ. ಶೀಘ್ರವೇ ಹೋರಾಟ ಅಂತ್ಯವಾಗಲಿದೆ ಎಂದು ಗುಂಪಿನ ವಕ್ತಾರರು ಹೇಳಿದ್ದಾರೆ. ಆದರೆ ಮತ್ತೊಂದು ಗುಂಪು, ವಿಕ್ರಮಸಿಂಘೆ ರಾಜೀನಾಮೆ ನೀಡುವವರೆಗೆ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಪ್ರಕಟಿಸಿದದೆ. ಜನತಾ ಸಭೆ ರಚಿಸಿದಾಗ ಮಾತ್ರ ನಮ್ಮ ಹೋರಾಟಕ್ಕೆ ಫಲ ಸಿಗುತ್ತದೆ. ಆವರೆಗೂ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಗುಂಪಿನ ವಕ್ತಾರ ಲಾಹಿರು ವೀರಶೇಖರ ಹೇಳಿದ್ದಾರೆ.

ಈ ನಡುವೆ ಪ್ರತಿಭಟನೆಯನ್ನು ಬಲ ಪ್ರಯೋಗದ ಮೂಲಕ ಹತ್ತಿಕ್ಕಲು ಅಧ್ಯಕ್ಷರು ಸೂಚಿಸಿದ್ದಾರೆ. ಶಾಂತಿಯುತ ಪ್ರತಿಭಟನಾಕಾರರಿಗೆ ನಾವು ಬೆಂಬಲ ನೀಡುತ್ತೇವೆ. ಆದರೆ ಪ್ರತಿಭಟನೆಯ ಸೋಗಿನಲ್ಲಿ ಹಿಂಸಾಚಾರವನ್ನು ಉತ್ತೇಜಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣವಾಗಿ ವರ್ತಿಸುತ್ತೇವೆ. ಅಧ್ಯಕ್ಷರ ಕಚೇರಿಯನ್ನು ಆಕ್ರಮಿಸಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ವಿಕ್ರಮಸಿಂಘೆ ತಿಳಿಸಿದ್ದಾರೆ.

ಪ್ರತಿಭಟನೆಯ ಕೇಂದ್ರ ಸ್ಥಾನವಾಗಿರುವ ಕೊಲೊಂಬೋದ ಗಾಲ್ ಫೇಸ್ ಸ್ಥಳದಲ್ಲಿ ಶುಕ್ರವಾರ ಉದ್ವಿಗ್ನ ದೃಶ್ಯಗಳು ಕಂಡು ಬಂದಿವೆ. ಸೇನೆಯ ದೊಡ್ಡ ತುಕಡಿಗಳು ಈ ಪ್ರದೇಶದ ಮೇಲೆ ದಾಳಿ ನಡೆಸಿವೆ. ಪ್ರತಿಭಟನಾಕಾರರ ಟೆಂಟ್‍ಗಳನ್ನು ಕಿತ್ತು ಹಾಕಿವೆ. ಕೆಲವರನ್ನು ಬಂಧಿಸುತ್ತಿರುವುದು ಕಂಡು ಬಂದಿದೆ.

Articles You Might Like

Share This Article