ನೆರೆ ಸಂತ್ರಸ್ತರ ಬಗ್ಗೆ ಬಿಜೆಪಿ ನಿರಾಸಕ್ತಿ : ಗುಂಡೂರಾವ್ ಆರೋಪ

ಹುಬ್ಬಳ್ಳಿ, ಸೆ.24- ಅನರ್ಹ ಶಾಸಕರ ವಿಚಾರದಲ್ಲಿ ತೋರಿಸಿದ ಆಸಕ್ತಿಯನ್ನು ಬಿಜೆಪಿ ಸರ್ಕಾರ ನೆರೆ ಸಮಸ್ಯೆ ಬಗ್ಗೆ ತೋರಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ತೆರಳುವ ಮುನ್ನ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,

ರಾಜ್ಯದ ಜನ ಪ್ರವಾಹದಿಂದ ಕಂಗೆಟ್ಟುಹೋಗಿದ್ದಾರೆ. ಉತ್ತರ ಕರ್ನಾಟಕದ ಮಂದಿ ಅಕ್ಷರಶಃ ಬೀದಿ ಪಾಲಾಗಿದ್ದಾರೆ. ಈ ವೇಳೆಯಲ್ಲಿ ರಾಜ್ಯ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುವುದನ್ನು ಬಿಟ್ಟು ಅನರ್ಹ ಶಾಸಕರ ಸಮಸ್ಯೆ ಬಗ್ಗೆ ಚರ್ಚಿಸಲು ವರಿಷ್ಠರ ಬಳಿ ಹೋಗಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಹೇಳಿದರು.

ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಬಂದಾಗ ಕೇಂದ್ರ ಸರ್ಕಾರ ಸ್ಪಂದಿಸಬೇಕು. ರಾಜ್ಯದ ಬಹುತೇಕ ಜನರು ಪ್ರವಾಹಕ್ಕೆ ಸಿಕ್ಕು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಬಿಡಿಗಾಸು ಅನುದಾನ ನೀಡದೆ ನಿರ್ಲಕ್ಷ್ಯ ತೋರಿದೆ. ರಾಜ್ಯ ಸರ್ಕಾರ ನೆರೆ ವಿಷಯದಲ್ಲಿ ವಿಫಲವಾಗಿದೆ. ರಾಜ್ಯದ 25 ಜನ ಸಂಸದರು ಕೂಡ ನೆರೆ ಸಮಸ್ಯೆಯನ್ನು ಎತ್ತಿಹಿಡಿಯುತ್ತಿಲ್ಲ.

ಈವರೆಗೆ ರಾಜ್ಯ ಸರ್ಕಾರ ಸರ್ವ ಪಕ್ಷ ಸಭೆ ಕರೆದಿಲ್ಲ. ಈ ಹಿನ್ನೆಲೆಯಲ್ಲಿ ಕೆಂದ್ರ ಮತ್ತು ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.