ರಾಹುಲ್‍ಗಾಂಧಿ ಏಕೆ ಕ್ಷಮೆ ಕೇಳಬೇಕು..? : ಗುಂಡೂರಾವ್ ಟ್ವೀಟ್

ಬೆಂಗಳೂರು, ಡಿ.13-ರಾಹುಲ್‍ಗಾಂಧಿ ಏಕೆ ಕ್ಷಮೆ ಕೇಳಬೇಕು ಎಂದು ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಬಿಜೆಪಿ ಸರ್ಕಾರದಲ್ಲಿ ಅತ್ಯಾಚಾರಿಗಳನ್ನು ರಕ್ಷಿಸಲಾಗುತ್ತಿದೆ. ಬಲಿಪಶುಗಳನ್ನು ಕೊಲೆ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಟ್ವಿಟರ್‍ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದಾರೆ.

ಭಾರತ ಮೇಕಿನ್ ಇಂಡಿಯಾ ಬದಲಾಗಿ, ರೇಪ್ ಇಂಡಿಯಾ ಆಗುತ್ತಿದೆ ಎಂದು ರಾಹುಲ್‍ಗಾಂಧಿ ಹೇಳಿಕೆ ನೀಡಿದ್ದರು. ಇದನ್ನು ಮುಂದಿಟ್ಟುಕೊಂಡು ಲೋಕಸಭೆಯಲ್ಲಿ ಭಾರೀ ಗದ್ದಲ ನಡೆದಿದ್ದು, ರಾಹುಲ್‍ಗಾಂಧಿ ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಗಿದೆ. ಇದಕ್ಕೆ ತಿರುಗೇಟು ನೀಡಿರುವ ದಿನೇಶ್‍ಗುಂಡೂರಾವ್ ರಾಹುಲ್‍ಗಾಂಧಿ ಏಕೆ ಕ್ಷಮೆ ಕೇಳಬೇಕೆಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರ ಇರುವ ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲಾಗಿದೆ. ಜೀವ ಬೆದರಿಕೆ ಹಾಕಲಾಗಿದೆ. ಕೊನೆಗೆ ಅವರನ್ನು ಕೊಲೆ ಮಾಡಲಾಗಿದೆ. ನಮ್ಮ ಕಣ್ಣೆದುರಿಗೆ ಇರುವ ಉನ್ನಾವೊ, ಕತ್ವಾ ಘಟನೆಗಳನ್ನು ಮರೆಯಲು ಸಾಧ್ಯವೆ ಎಂದಿದ್ದಾರೆ. ಅತ್ಯಾಚಾರಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಒಂದು ಮಾತನ್ನೂ ಆಡದೆ ಮೌನಕ್ಕೆ ಶರಣಾಗಿರುವುದನ್ನು ದಿನೇಶ್‍ಗುಂಡೂರಾವ್ ಕೆಣಕಿದ್ದಾರೆ.