ಕೆಪಿಸಿಸಿ ಕಚೇರಿಯಲ್ಲಿ 71ನೇ ಗಣರಾಜ್ಯೋತ್ಸವದ ಸಂಭ್ರಮ

Spread the love

ಬೆಂಗಳೂರು, ಜ.26-ಸಂವಿಧಾನದ ಮೂಲ ಆಶಯಗಳ ಮೇಲೆ ಆಕ್ರಮಣ ಮಾಡುತ್ತಿರುವ ಬಿಜೆಪಿ, ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ದಾರಿ ತಪ್ಪಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು 71ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ, ಮಾತನಾಡಿದ ಅವರು, ಮಾನವೀಯ ಮೌಲ್ಯಗಳು ಮತ್ತು ವೈವಿಧ್ಯತೆಯ ಆಧಾರದ ಮೇಲೆ ನಿರ್ಮಿಸಲಾಗಿದ್ದ ರಾಷ್ಟ್ರವನ್ನು ಬಿಜೆಪಿ ಕೇವಲ ಆರೂವರೆ ವರ್ಷಗಳಲ್ಲಿ ಹಾಳುಮಾಡುತ್ತಿದೆ.

ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಒಂದಲ್ಲ ಒಂದು ತಪ್ಪುಗಳು ನಡೆಯುತ್ತಲೇ ಇವೆ. ಚುನಾವಣಾ ಆಯೋಗ , ಮಾಹಿತಿ ಆಯೋಗ, ಆರ್‍ಬಿಐ ಸೇರಿದಂತೆ ಹಲವಾರು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂದರು.

ಸಿಬಿಐ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳನ್ನು ತಮ್ಮ ಪಕ್ಷದ ವಿರುದ್ಧ ಮಾತನಾಡುವವರನ್ನು ಮಟ್ಟ ಹಾಕಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿಯನ್ನು ಪ್ರಶ್ನೆ ಮಾಡಿದವರು ದೇಶದ್ರೋಹಿಗಳಾಗುತ್ತಿದ್ದಾರೆ. ಎಲ್ಲಾ ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹೇಳಿದರು. ಜನ ಕಾಂಗ್ರೆಸ್ ಪಕ್ಷವನ್ನು ಗಮನಿಸುತ್ತಿದ್ದಾರೆ.

ಬಿಜೆಪಿಯ ಸಂವಿಧಾನ ವಿರೋಧಿ ಕೃತ್ಯಗಳನ್ನು ನಾವು ವಿರೋಧಿಸಬೇಕಿದೆ. ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬದಿಗಿಟ್ಟು ಯಾವುದೇ ಅಧಿಕಾರದ ಆಸೆಗೆ ಜೋತುಬೀಳದೆ ದೇಶದ ಒಳಿತಿಗಾಗಿ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದರು. ಭಾರತದಲ್ಲಿ ಹಿಂದೆಂದೂ ಇರದಷ್ಟು ಸಂಕಷ್ಟ ಪರಿಸ್ಥಿತಿ ಇದೆ, ನಿರುದ್ಯೋಗ ತಾಂಡವವಾಡುತ್ತಿದೆ, ಬೆಲೆ ಏರಿಕೆ ಹೆಚ್ಚಾಗಿದೆ, ಜಿಡಿಪಿ ಕುಸಿದಿದೆ. ಆದರೆ ಬಿಜೆಪಿಗೆ ಇದ್ಯಾವುದೂ ಮುಖ್ಯವಲ್ಲ, ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ. ಬಂಡವಾಳ ಹೂಡಿಕೆಯಾಗುತ್ತಿಲ್ಲ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಯುವಕರ ಭವಿಷ್ಯ ಕತ್ತಲಿನಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಬದಲಾಗಿ ಸಿಎಎ, ಎನ್‍ಆರ್‍ಸಿ ಹೆಸರಿನಲ್ಲಿ ವೈಷಮ್ಯ, ದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದೆ. ತ್ಯಾಗ, ಬಲಿದಾನಗಳಿಂದ ಸಿಕ್ಕ ಸ್ವಾತಂತ್ರ್ಯ ನಮ್ಮ ಆತ್ಮವಾಗಿದ್ದರೆ, ಸಂವಿಧಾನ ನಮ್ಮ ಆತ್ಮಸಾಕ್ಷಿ. ಇದಕ್ಕೆ ಧಕ್ಕೆಯಾಗಲು ಅವಕಾಶ ನೀಡಬಾರದು ಎಂದು ದಿನೇಶ್ ಗುಂಡೂರಾವ್ ಕರೆ ನೀಡಿದರು.

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಂವಿಧಾನ ಪೀಠಿಕೆಗಳನ್ನು ಕಡ್ಡಾಯವಾಗಿ ಅನುಸರಿಸುವ ಪ್ರತಿಜ್ಞೆಯನ್ನು ಕಾಂಗ್ರೆಸ್ಸಿಗರು ಸ್ವೀಕರಿಸಿದರು.