ಅಸೂಯೆಯ ರಾಜಕಾರಣ ಬಿಡಿ, ಇಂದಿರಾ ಕ್ಯಾಂಟಿನ್‍ಗೆ ಅನುದಾನ ನೀಡಿ : ದಿನೇಶ್

ಬೆಂಗಳೂರು, ಅ.22- ಇಂದಿರಾ ಕ್ಯಾಂಟಿನ್ ನಿರ್ವಹಿಸುತ್ತಿರುವ ಬಿಬಿಎಂಪಿಗೆ ಸರ್ಕಾರ ಅನುದಾನ ನೀಡದಿರುವುದು ಅಸೂಯೆಯ ರಾಜಕಾರಣವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಈ ಕುರಿತು ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿದ ಅವರು ಬಡವರ ಹಸಿವು ನೀಗಿಸುವ ಮಹತ್ವಾಂಕ್ಷಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಇಂದಿರಾ ಕ್ಯಾಟೀನ್‍ಗಳನ್ನು ಪ್ರಾರಂಭಿಸಿತ್ತು.

ಆದರೆ ಬಡವರ ಹಸಿದ ಹೊಟ್ಟೆಗಳನ್ನು ತುಂಬುವುದು ರಾಜ್ಯದ ಬಿಜೆಪಿ ಸರ್ಕಾರಕ್ಕೆ ಬೇಕಾಗಿಲ್ಲ. ಇಂದಿರಾ ಕ್ಯಾಂಟೀನ್ ನಿರ್ವಹಿಸುತ್ತಿರುವ ಬಿಬಿಎಂಗೆ ಸರ್ಕಾರ ಅನುದಾನ ನೀಡದೇ ಹೊಟ್ಟೆಕಿಚ್ಚಿನ ರಾಜಕಾರಣ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಬಡವರ ಹಸಿವಿನ ಸಂಕಟ ಮತ್ತು ಅನ್ನದ ಬೆಲೆ ಗೊತ್ತಿದ್ದರೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್‍ಗಳನ್ನು ಮುಚ್ಚಲು ಮುಂದಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಗಂಭೀರ ಆರೋಪ ಮಾಡಿದ್ದರು. ಬಡವರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ಸಿಗಬೇಕೆಂಬ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಬೆಂಗಳೂರು ಸೇರಿದಂತೆ ವಿವಿಧೆಡೆ ಇಂದಿರಾ ಕ್ಯಾಂಟಿನ್‍ಗಳನ್ನು ಪ್ರಾರಂಭಿಸಿತು.

ಪ್ರಸ್ತುತ ಅದನ್ನು ನಿರ್ವಹಿಸುತ್ತಿರುವ ಬಿಬಿಎಂಪಿಗೆ ಸರ್ಕಾರ ಅನುದಾನವನ್ನೇ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್‍ಗಳು ಸರಿಯಾಗಿ ನಡೆಯದೇ ಅಲ್ಲಿ ಜನಸಾಮಾನ್ಯರಿಗೂ ತಿಂಡಿ, ಊಟ ಸಿಗುತ್ತಿಲ್ಲ. ಪ್ರತಿಪಕ್ಷ ಕಾಂಗ್ರೆಸ್‍ನ ನಾಯಕರು ಇಂದಿರಾ ಕ್ಯಾಂಟೀನ್‍ಗಳಿಗೆ ಸರಿಯಾಗಿ ಅನುದಾನ ನೀಡಬೇಕೆಂದು ಆಗ್ರಹಿಸಿದ್ದಾರೆ.