ಸಾರಿಗೆ ನೌಕರರ ವೇತನ ನೀಡಲು ನೆಪ ಬೇಡ : ದಿನೇಶ್ ಗುಂಡುರಾವ್

ಬೆಂಗಳೂರು, ನ.15- ಸಾರಿಗೆ ಸಂಸ್ಥೆಗಳ ನಾಲ್ಕು ನಿಗಮಗಳ ನೌಕರರಿಗೆ ವೇತನ ಕೊಡದಿರುವುದಕ್ಕೆ ಸಾರಿಗೆ ಇಲಾಖೆ ಮತ್ತು ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಸ್ವತಃ ಉಪಮುಖ್ಯಮಂತ್ರಿ ಕೈಯಲ್ಲೇ ಸಾರಿಗೆ ಇಲಾಖೆಯಿದ್ದರೂ 1.35 ಲಕ್ಷ ಸಾರಿಗೆ ನೌಕರರಿಗೆ ಸಂಬಳ ಆಗಿಲ್ಲ. ಸಂಬಳ ಇಲ್ಲದೆ ದೀಪಾವಳಿಯಂತಹ ಸಡಗರದ ಹಬ್ಬವನ್ನೂ ಸಾರಿಗೆ ನೌಕರರು ಆಚರಿಸದಂತಾಗಿದೆ ಎಂದು ವಿಷಾದಿಸಿದ್ದಾರೆ.

ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ಸಾರಿಗೆ ನೌಕರರ ಸಂಬಳ ಆಗದಿರುವದಕ್ಕೆ ಸಚಿವ ಸವದಿ ಕೋವಿಡ್ ನೆಪ ಹೇಳುತ್ತಿದ್ದಾರೆ. ಕೋವಿಡ್ ಬಿಸಿ ಕೇವಲ ಸಾರಿಗೆ ಇಲಾಖೆಗೆ ಮಾತ್ರ ತಟ್ಟಿಲ್ಲ. ಕೋವಿಡ್ ನೆಪ ಬಿಟ್ಟು ಸಾರಿಗೆ ಇಲಾಖೆ, ಸಂಪನ್ಮೂಲ ಕ್ರೋಡೀಕರಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಈಗ ಹಣಕಾಸು ಇಲಾಖೆ ಕಡೆ ಬೊಟ್ಟು ತೋರಿಸಿದರೆ ಸಾರಿಗೆ ನೌಕರರ ಜೀವನ ನಡೆಯುವುದ್ದೇಗೆ ? ಎಂದು ಪ್ರಶ್ನಿಸಿದ್ದಾರೆ.

Sri Raghav

Admin