ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ : ಗುಂಡೂರಾವ್

ಬೆಂಗಳೂರು, ಆ.15- ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರ ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ.

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದ್ದು, ಜನರ ಟೀಕೆ-ಟಿಪ್ಪಣಿ ಅವಕಾಶವೂ ದಮನವಾಗುತ್ತಿದೆ. ವಿರೋಧ ಪಕ್ಷಗಳನ್ನು ಹತ್ತಿಕ್ಕುವಂತಹ ಕೆಲಸವಾಗುತ್ತಿದೆ. ಕೋಮುವಾದದ ಸಿದ್ಧಾಂತ ಈ ದೇಶದ ಚುಕ್ಕಾಣಿ ಹಿಡಿದಿದೆ ಎಂದು ಆರೋಪಿಸಿದರು.

ಭಯದ ವಾತಾವರಣ ಹಾಗೂ ವೈಷಮ್ಯ ಹೆಚ್ಚುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ದೇಶ ಗಂಭೀರ ಪರಿಸ್ಥಿತಿಯಲ್ಲಿದ್ದು, ಎಲ್ಲರಿಗೂ ಸಮಾನ ಹಕ್ಕು ಸಿಗಲು ಕೇಂದ್ರ ಸರ್ಕಾರ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ಆದರೆ ಬ್ರಿಟಿಷರ ವಿರುದ್ಧ ಕಾಂಗ್ರೆಸ್ ನಡೆಸಿದ ಹೋರಾಟದಿಂದ ಬದಲಾವಣೆಯಾಯಿತು.

ದೇಶದಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ. ತನಿಖಾ ಸಂಸ್ಥೆ, ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ರಾಜಾರೋಷವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಕ್ಷೇಪಿಸಿದರು. ಧರ್ಮಾಧಾರಿತ ದೇಶವಾದ ಪಾಕಿಸ್ತಾನ ಯಶಸ್ವಿಯಾಗಿಲ್ಲ. ನಮ್ಮದು ಜಾತ್ಯತೀತ ದೇಶವಾಗಿರುವುದರಿಂದ ನಾವು ಯಶಸ್ಸು ಕಂಡಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಹೋರಾಟದ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ತ್ಯಾಗಕ್ಕೂ ಕಾರ್ಯಕರ್ತರು ಸಿದ್ಧರಾಗಬೇಕು ಎಂದರು. ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಲವು ವೀರರು ತ್ಯಾಗ ಮಾಡಿದ್ದಾರೆ. ಸಮಾನ ಹಕ್ಕು, ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ನಮ್ಮ ಹಿರಿಯರು ಮಾಡಿರುವ ತ್ಯಾಗವನ್ನು ನೆನಪಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.