ಸುಪ್ರೀಂ ತೀರ್ಪು ಪ್ರಕಟ : ಕಾರ್ಯಕರ್ತರು-ಅಭಿಮಾನಿಗಳಿಂದ ವಿಜಯೋತ್ಸವ

ಬೆಂಗಳೂರು, ನ.13-ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸುತ್ತಿದ್ದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ಆಚರಿಸಿದ್ದಾರೆ. ಹದಿನೈದು ಮಂದಿಯ ಅನರ್ಹತೆ ಪ್ರಕರಣಕ್ಕೆ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಸ್ಪೀಕರ್ ಅವರ ಕ್ರಮವನ್ನು ಎತ್ತಿ ಹಿಡಿದಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದರಿಂದ ಕಾರ್ಯಕರ್ತರಲ್ಲಿ ಎಲ್ಲಿಲ್ಲದ ಉತ್ಸಾಹ ಮೂಡಿದೆ.

ಈಗಾಗಲೇ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತೀರ್ಪನ್ನೇ ಎದುರು ನೋಡಲಾಗುತ್ತಿತ್ತು. ತೀರ್ಪು ಅನರ್ಹತೆಯನ್ನು ಎತ್ತಿ ಹಿಡಿದು ಚುನಾವಣೆಯಲ್ಲಿ ಸ್ಪರ್ಧಿಸಲು ಸಮ್ಮತಿ ನೀಡಿರುವುದರಿಂದ ಚುನಾವಣಾ ಕಾರ್ಯಗಳು ಬಿರುಸುಗೊಂಡಿರುವ ಜೊತೆಗೆ ಕಾರ್ಯಕರ್ತರಲ್ಲಿ ಹರ್ಷ ಮೂಡಿಸಿದೆ.

ಆ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು. ಇದೇ ವೇಳೆ ಪರಸ್ಪರ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.