ಸದ್ಯದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

Spread the love

ಬೆಂಗಳೂರು,ಫೆ.10- ನೂತನ ಸಚಿವರಿಗೆ ಅಳೆದುತೂಗಿ ಖಾತೆಗಳನ್ನು ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದೆರಡು ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆಯನ್ನು ನೀಡಲಿದ್ದಾರೆ.  ಮೂಲ ಮತ್ತು ವಲಸಿಗರ ನಡುವೆ ಸಂಘರ್ಷ ಬಾರದಂತೆ ಹೊಸಬರಿಗೂ ಜಿಲ್ಲಾ ಉಸ್ತುವಾರಿಯನ್ನು ನೀಡಲಿದ್ದಾರೆ. ತಾವು ನಿರೀಕ್ಷಿಸಿದ ಖಾತೆಯನ್ನೇ ಪಡೆಯುವಲ್ಲಿ ಯಶಸ್ವಿಯಾಗಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ನೀಡುವುದು ಬಹುತೇಕ ಖಚಿತವಾಗಿದೆ.

ಸದ್ಯ ಬೆಳಗಾವಿ ಜಿಲ್ಲೆ ಉಸ್ತುವಾರಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್‍ಗೆ ನೀಡಲಾಗಿತ್ತು. ತಮಗೆ ಸ್ವಂತ ಜಿಲ್ಲೆಯ ಉಸ್ತುವಾರಿ ನೀಡಲೇಬೇಕೆಂದು ರಮೇಶ್ ಪಟ್ಟು ಹಿಡಿದಿದ್ದರು.  ಎರಡು ದಿನಗಳ ಹಿಂದೆ ಸಿಎಂ ನಿವಾಸಕ್ಕೆ ರಮೇಶ್ ಜಾರಕಿಹೊಳಿ ಜೊತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮಾತುಕತೆ ನಡೆಸಿದ್ದಾಗ ಬೆಳಗಾವಿ ಉಸ್ತುವಾರಿ ನೀಡುವುದಾಗಿ ವಾಗ್ದಾನ ಮಾಡಿದ್ದರು.

ಈಗ ಅದರಂತೆ ಜಾರಕಿಹೊಳಿಗೆ ಹೊಣೆಗಾರಿಕೆ ಸಿಗುವುದು ಬಹುತೇಕ ಖಚಿತ. ಜೆಡಿಎಸ್‍ನ ಭದ್ರ ಕೋಟೆ ಎನಿಸಿದ ಮಂಡ್ಯದಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸುವಲ್ಲಿ ಯಶಸ್ವಿಯಾಗಿರವ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಿಗಲಿದೆ. ಇವರೆಗೂ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ಡಿಸಿಎಂ ಅಶ್ವಥ್ ನಾರಾಯಣ್ ಅವರಿಗೆ ನೀಡಲಾಗಿತ್ತು.

ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ವಿರುದ್ದ ತೊಡೆತಟ್ಟಿ ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ಗೆದ್ದಿರುವ ಶಿವರಾಮ್ ಹೆಬ್ಬಾರ್‍ಗೆ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಿಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ನಿರ್ವಹಿಸುತ್ತಿದ್ದರು. ಇದೀಗ ಶಿವರಾಮ್ ಹೆಬ್ಬಾರ್ ಸಂಪುಟಕ್ಕೆಸೇರ್ಪಡೆಯಾಗಿರುವುದರಿಂದ ಅವರಿಗೆ ಇದರ ಉಸ್ತುವಾರಿ ಸಿಗಲಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಭಾರೀ ಅಂತರದ ಮತಗಳಿಂದ ಜಯಗಳಿಸಿ ಕಮಲವನ್ನು ಅರಳಿಸುವಲ್ಲಿ ಡಾ.ಕೆ.ಸುಧಾಕರ್‍ಗೆ ತವರು ಜಿಲ್ಲೆ ಚಿಕ್ಕಬಳ್ಳಾಪುರ ಉಸ್ತುವಾರಿಯನ್ನೇ ನೀಡಲಾಗುತ್ತಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಈಗಾಗಲೇ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಅರಣ್ಯ ಸಚಿವ ಬಿ.ಸಿ.ಪಾಟೀಲ್‍ಗೆ ದಾವಣಗೆರೆ ಜಿಲ್ಲೆಯ ಉಸ್ತುವಾರಿ ನೀಡುವ ಸಂಭವವಿದೆ. ಸದ್ಯ ದಾವಣಗೆರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ನೀಡಲಾಗಿತ್ತು. ವಿಜಯನಗರ ನೂತನ ಜಿಲ್ಲೆಗೆ ಬೇಡಿಕೆ ಇಟ್ಟಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಆನಂದ್ ಸಿಂಗ್‍ಗೆ ಬಳ್ಳಾರಿ ಉಸ್ತುವಾರಿ ನೀಡುವ ಸಾದ್ಯತೆ ಇದೆ.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಸದ್ಯ ಬಳ್ಳಾರಿ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು. ಈಗ ಅದೇ ಜಿಲ್ಲೆಯ ಆನಂದ್‍ಸಿಂಗ್ ಸಚಿವರಾಗಿರುವುದರಿಂದ ಇದೇ ಜಿಲ್ಲೆಯ ಜವಾಬ್ದಾರಿಯನ್ನು ನೀಡಲಿದ್ದಾರೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‍ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಣೆಗಾರಿಕೆ ಸಿಗಲಿದೆ. ಕಂದಾಯ ಸಚಿವ ಆರ್.ಅಶೋಕ್‍ಗೆ ಹೆಚ್ಚುವರಿಯಾಗಿ ಈ ಜಿಲ್ಲೆಯ ಹೊಣೆಗಾರಿಕೆ ನೀಡಲಾಗಿತ್ತು.

ಸಣ್ಣ ಕೈಗಾರಿಕೆ ಸಚಿವ ಗೋಪಾಲಯ್ಯ ಅವರಿಗೆÀ ಚಾಮರಾಜನಗರ ಇಲ್ಲವೇ ಮಡಿಕೇರಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‍ಗೆ ಬೇರೊಂದು ಜಿಲ್ಲೆಯ ಉಸ್ತುವಾರಿ ನೀಡಲಿದ್ದಾರೆ. ಉಳಿದಂತೆ ಶ್ರೀಮಂತ್ ಪಾಟೀಲ್‍ಗೆ ಎರಡೆರಡು ಜಿಲ್ಲಾ ಉಸ್ತುವಾರಿ ಹೊತ್ತುಕೊಂಡಿರುವವರನ್ನು ಒಂದೇ ಜಿಲ್ಲೆಗೆ ಸೀಮಿತಗೊಳಿಸಲಿದ್ದಾರೆ.

1.ರಮೇಶ್ ಜಾರಕಿಹೊಳಿ-ಬೆಳಗಾವಿ
2. ಶಿವರಾಮ್ ಹೆಬ್ಬಾರ್-ಉತ್ತರ ಕನ್ನಡ
3. ಡಾ.ಕೆ.ಸುಧಾಕರ್-ಚಿಕ್ಕಬಳ್ಲಾಪುರ
4. ಕೆ.ಸಿ.ನಾರಾಯಣಗೌ
5. ಆನಂದ್ ಸಿಂಗ್-ಬಳ್ಳಾರಿ
6.ಬಿ.ಸಿ. ಪಾಟೀಲ್- ದಾವಣಗೆರೆ
7. ಕೆ.ಗೋಪಾಲಯ್ಯ- ಹಾಸನ
8. ಎಸ್.ಟಿ.ಸೋಮಶೇಖರ್-ಬೆಂ.ಗ್ರಾಮಾಂತರ
9. ಶ್ರೀಮಂತ್ ಪಾಟೀಲ್-ವಿಜಾಪುರ
10. ಭೈರತಿ ಬಸವರಾಜ್-ಚಾಮರಾಜನಗರ/ಮಡಿಕೇರಿ

Facebook Comments