ಬೆಂಗಳೂರು,ಜ.24- ಒಂದೆಡೆ ಸಚಿವ ಸಂಪುಟ ವಿಸ್ತರಣೆಗೆ ಶಾಸಕರಿಂದ ಬೇಡಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಉಸ್ತುವಾರಿ ನೇಮಕಾತಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಮೂಲಕ ಆಕಾಂಕ್ಷಿಗಳಿಗೆ ಭರ್ಜರಿ ಶಾಕ್ ಕೊಟ್ಟಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅಕಾರಾವಯಲ್ಲಿ ತಮ್ಮ ತಮ್ಮ ತವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದವರಿಗೆ ಈ ಬಾರಿ ನಿರೀಕ್ಷೆ ಮಾಡದ ರೀತಿಯಲ್ಲಿ ಬದಲಾವಣೆಯ ಬಿಸಿ ತಟ್ಟಿಸಿದ್ದಾರೆ. ಸರ್ಕಾರ ಅಧಿಕ್ಕಾರಕ್ಕೆ ಬಂದು ಇದೇ ತಿಂಗಳ 28ಕ್ಕೆ 6 ತಿಂಗಳು ಪೂರೈಸುತ್ತಿರುವ ಸಂದರ್ಭದಲ್ಲೇ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಲಾಗಿದ್ದು, ಎಲ್ಲರಿಗೂ ಬಿಸಿ ತಟ್ಟುವಂತೆ ಚಾಣಾಕ್ಷತನ ಸಿಎಂ ಬೊಮ್ಮಾಯಿ ಮೆರೆದಿದ್ದಾರೆ.
ಬೆಂಗಳೂರು ನಗರದ ಮೇಲೆ ಹಿಡಿತ ಸಾಸಲು ಯತ್ನಿಸುತ್ತಿದ್ದ ಸಚಿವರಾದ ಆರ್.ಅಶೋಕ್, ಅಶ್ವಥ್ ನಾರಾಯಣ, ವಿ.ಸೋಮಣ್ಣ ಅವರಿಗೂ ಶಾಕ್ ನೀಡಿರುವ ಬೊಮ್ಮಾಯಿ ಇದನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ಗೆ ಪುನಃ ಮೈಸೂರು ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಗೆ ಯಾವುದೇ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿಲ್ಲ.
ಸದಾ ಒಂದಿಲ್ಲೊಂದು ಕಾರಣದಿಂದ ರಾಜ್ಯದ ಗಮನಸೆಳೆಯುವ ಗಡಿ ಜಿಲ್ಲೆ ಬೆಳಗಾವಿಯನ್ನು ಜಲಸಂಪನ್ಮೂಲ ಸಚಿವ ಗೋವಿಂದಕಾರಜೋಳ ಹೆಗಲಿಗೆ ನೀಡಿದ್ದಾರೆ. ಈ ಜಿಲ್ಲೆಯಿಂದ ಸಚಿವೆ ಶಶಿಕಲಾ ಜೊಲ್ಲೆ ಇದ್ದರೂ ಉಸ್ತುವಾರಿ ಮಾತ್ರ ಕಾರಜೋಳ ಅವರಿಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಸೇರ್ಪಡೆಯಾದರೂ ಯಾವುದೇ ರೀತಿಯ ತೊಡಕಾಗದಂತೆ ಇಲ್ಲಿಯೂ ಕೂಡ ಎಚ್ಚರಿಕೆ ಹೆಜ್ಜೆ ಇಡಲಾಗಿದೆ.
ಶಿವಮೊಗ್ಗ ಜಿಲ್ಲೆಯಿಂದ ಈಶ್ವರಪ್ಪ ಮತ್ತು ಅರಗ ಜ್ಞಾನೇಂದ್ರ ಇಬ್ಬರು ಪ್ರಭಾವಿ ಸಚಿವರಿದ್ದರೂ ಈ ಜಿಲ್ಲೆಯ ಉಸ್ತುವಾರಿಯನ್ನು ಇಬ್ಬರಿಗೂ ನೀಡಿಲ್ಲ.ಯಾರಿಗೇ ನೀಡಿದರೂ ಮುನಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಮಂಡ್ಯ ಜಿಲ್ಲೆಯ ಕೆ.ಆರ್.ನಾರಾಯಣಗೌಡರಿಗೆ ನೀಡಿರುವುದು ಮತ್ತೊಂದು ವಿಶೇಷ.
ಈಶ್ವರಪ್ಪ ಅವರಿಗೆ ಚಿಕ್ಕಮಗಳೂರು ಜಿಲ್ಲೆ ನೀಡಲಾಗಿದ್ದು, ಗಣಿ ಜಿಲ್ಲೆ ಬಳ್ಳಾರಿ ನಿರೀಕ್ಷೆಯಂತೆ ಸಾರಿಗೆ ಸಚಿವ ಶ್ರೀರಾಮುಲು ಪರವಾಗಿದೆ.
ಬೆಂಗಳೂರು ನಗರದ ಮೇಲೆ ಕಣ್ಣಿಟ್ಟಿದ್ದ ವಸತಿ ಸಚಿವ ವಿ.ಸೋಮಣ್ಣನಿಗೆ ಚಾಮರಾಜನಗರ, ಉಮೇಶ್ ಕತ್ತಿಗೆ ವಿಜಯಪುರದ ಉಸ್ತುವಾರಿ ನೀಡಲಾಗಿದೆ.
ತುಮಕೂರು ಜಿಲ್ಲೆಯಿಂದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಇದ್ದರೂ ಕೂಡ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ವಹಿಸಲಾಗಿದೆ.
ಇತ್ತೀಚೆಗಷ್ಟೇ ಸಂಸದ ಬಸವರಾಜು ಮಾಧುಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬರುವ ಚುನಾವಣೆಯಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಕಾರಣಕ್ಕಾಗಿ ಬದಲಾವಣೆ ಮಾಡಲಾಗಿದೆ ಎಂಬ ಮಾತು ಕೇಳಿಬಂದಿದೆ.
ಇತ್ತೀಚೆಗಷ್ಟೇ ಡಿ.ಕೆ. ಸಹೋದರರ ವಿರುದ್ಧ ಬಹಿರಂಗವಾಗಿ ತೊಡೆಗೊಟ್ಟಿದ್ದ ಸಚಿವ ಅಶ್ವಥ್ ನಾರಾಯಣರಿಗೆ ಮತ್ತೆ ರಾಮನಗರ ಜಿಲ್ಲೆ ಹೊಣೆಗಾರಿಕೆ ಕೊಡಲಾಗಿದೆ. ಗದಗ ಜಿಲ್ಲೆಯ ಉಸ್ತುವಾರಿಯಾಗಿದ್ದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರನ್ನು ಬಾಗಲಕೊಟೆಗೆ ನಿಯೋಜಿಸಲಾಗಿದೆ.
ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿದ್ದ ಆನಂದ್ ಸಿಂಗ್ರನ್ನು ಕೊಪ್ಪಳಕ್ಕೆ , ಕೋಟಾಶ್ರೀನಿವಾಸ ಪೂಜಾರಿಗೆ ಉತ್ತರ ಕನ್ನಡ ಕೊಡಲಾಗಿದೆ. ಇಬ್ಬರನ್ನು ಕೂಡ ತವರು ಜಿಲ್ಲೆಯಿಂದ ಬದಲಾಯಿಸಿರುವುದು ವಿಶೇಷ.
ಬೀದರ್ ಜಿಲ್ಲಾ ಉಸ್ತುವಾರಿಯಾಗಿದ್ದ ಪ್ರಭು ಚವ್ಹಾಣ್ಗೆ ಯಾದಗಿರಿ ನೀಡಿದ್ದರೆ, ಸಚಿವ ಮುರುಗೇಶ್ ನಿರಾಣಿ ಅವರನ್ನು ಪುನಃ ಕಲಬುರಗಿಯನ್ನು ವಹಿಸಲಾಗಿದೆ.
ಸಿಎಂ ತವರು ಜಿಲ್ಲೆ ಹಾವೇರಿಗೆ ಬಿ.ಸಿ.ಪಾಟೀಲ್ ಬದಲಿಗೆ ಉತ್ತರಕನ್ನಡ ಜಿಲ್ಲಾ ಉಸ್ತುವಾರಿಯಾಗಿದ್ದ ಅರೆಬೈಲ್ ಶಿವರಾಮ್ ಹೆಬ್ಬಾರ್ಗೆ ವಹಿಸಲಾಗಿದೆ. ಹಾವೇರಿ ಜಿಲ್ಲೆ ಮೇಲೆ ಕಣ್ಣಿಟ್ಟಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ಗೆ ಮತ್ತೆ ನಿರಾಸೆಯಾಗಿದ್ದು, ಚಿತ್ರದುರ್ಗ ಜಿಲ್ಲೆ ನೀಡಲಾಗಿದೆ. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ಗೆ ಪುನಃ ದಾವಣಗೆರೆ ನೀಡಲಾಗಿದೆ.
ಅಚ್ಚರಿ ಎಂದರೆ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಚಿವ ಡಾ.ಕೆ.ಸುಧಾಕರ್ಗೆ ಹಿನ್ನಡೆಯಾಗಿದೆ. ತವರು ಜಿಲ್ಲೆ ಚಿಕ್ಕಬಳ್ಳಾಪುರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ನೀಡಲಾಗಿದ್ದು, ಇದನ್ನು ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಅಬಕಾರಿ ಸಚಿವ ಕೆ.ಗೋಪಾಲಯ್ಯಗೆ ಹಾಸನದ ಜೊತೆಗೆ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ. ಏಕೈಕ ಮಹಿಳಾ ಸಚಿವೆ ಶಶಿಕಲಾ ಜೊಲ್ಲೆಗೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರಕ್ಕೆ ನಿಯೋಜಿಸಲಾಗಿದೆ.
ಅಚ್ಚರಿ ಎಂಬಂತೆ ಎಂಟಿಬಿ ನಾಗರಾಜ್ಗೆ ಚಿಕ್ಕಬಳ್ಳಾಪುರ, ಬಿ.ಸಿ.ನಾಗೇಶ್ಗೆ ಕೊಡುಗು ಉಸ್ತುವಾರಿ ವಹಿಸಲಾಗಿದೆ. ಉಡುಪಿ ಜಿಲ್ಲೆಯವರಾಗಿದ್ದರೂ ವಿ.ಸುನೀಲ್ಕುಮಾರ್ಗೆ ದಕ್ಷಿಣ ಕನ್ನಡ, ಆಚಾರ್ ಹಾಲಪ್ಪಗೆ ಧಾರವಾಡ, ಶಂಕರ್ ಪಟೇಲ್ ಮುನೇನಕೊಪ್ಪ ಅವರಿಗೆ ರಾಯಚೂರು ಜೊತೆಗೆ ಬೀದರ್ ಜಿಲ್ಲೆಯ ಹೊಣೆಗಾರಿಕೆ ನೀಡಲಾಗಿದೆ. ಮುನಿರತ್ನಗೆ ಕೋಲಾರ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.
ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ
ಗೋವಿಂದ ಕಾರಜೋಳ- ಬೆಳಗಾವಿ
ಕೆ.ಎಸ್.ಈಶ್ವರಪ್ಪ -ಚಿಕ್ಕಮಗಳೂರು
ಬಿ.ಶ್ರೀರಾಮುಲು- ಬಳ್ಳಾರಿ
ವಿ.ಸೋಮಣ್ಣ- ಚಾಮರಾಜನಗರ
ಉಮೇಶ್ಕತ್ತಿ – ವಿಜಯಪುರ
ಎಸ್.ಅಂಗಾರ – ಉಡುಪಿ
ಅರಗ ಜ್ಞಾನೇಂದ್ರ -ತುಮಕೂರು
ಡಾ.ಸಿ.ಎನ್.ಅಶ್ವಥ್ ನಾರಾಯಣ -ರಾಮನಗರ
ಸಿ.ಸಿ.ಪಾಟೀಲ್ -ಬಾಗಲಕೋಟೆ
ಆನಂದ್ ಸಿಂಗ್- ಕೊಪ್ಪಳ
ಕೋಟಾ ಶ್ರೀನಿವಾಸ ಪೂಜಾರಿ – ಉತ್ತರ ಕನ್ನಡ
ಪ್ರಭು ಚವ್ಹಾಣ -ಯಾದಗಿರಿ
ಮುರುಗೇಶ್ ನಿರಾಣಿ -ಕಲಬುರಗಿ
ಶಿವರಾಮ್ ಹೆಬ್ಬಾರ್-ಹಾವೇರಿ
ಎಸ್.ಟಿ.ಸೋಮಶೇಖರ್- ಮೈಸೂರು
ಬಿ.ಸಿ.ಪಾಟೀಲ್- ಚಿತ್ರದುರ್ಗ,/ಗದಗ
ಬಿ.ಎ.ಬಸವರಾಜ್- ದಾವಣಗೆರೆ
ಡಾ.ಕೆ.ಸುಧಾಕರ್- ಬೆಂಗಳೂರು ಗ್ರಾಮಾಂತರ
ಕೆ.ಗೋಪಾಲಯ್ಯ-ಹಾಸನ/ ಮಂಡ್ಯ
ಶಶಿಕಲಾ ಜೊಲ್ಲೆ- ವಿಜಯನಗರ
ಎಂ.ಟಿ.ಬಿ.ನಾರಾಜ್ -ಚಿಕ್ಕಬಳ್ಳಾಪುರ
ಕೆ.ಸಿ.ನಾರಾಯಣಗೌಡ- ಶಿವಮೊಗ್ಗ
ಬಿ.ಸಿ.ನಾಗೇಶ್- ಕೊಡಗು
ವಿ.ಸುನೀಲ್ಕುಮಾರ್- ದಕ್ಷಿಣ ಕನ್ನಡ
ಆಚಾರ್ ಹಾಲಪ್ಪ -ಧಾರವಾಡ
ಶಂಕರ್ ಪಟೇಲ್ ಮುನೇನಕೊಪ್ಪ – ರಾಯಚೂರು/ ಬೀದರ್
ಮುನಿರತ್ನ -ಕೋಲಾರ
