ಬೆಂಗಳೂರು,ಜ.25- ಸಾಕಷ್ಟು ಅಳೆದು ತೂಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದ್ದರೂ ತವರು ಜಿಲ್ಲೆ ಕೈ ತಪ್ಪಿರುವುದರಿಂದ ಅನೇಕ ಸಚಿವರು ಒಳಗೊಳಗೆ ಕೊತಕೊತ ಕುದಿಯುತ್ತಿದ್ದಾರೆ. ಬಹಿರಂಗವಾಗಿ ಅಸಮಾಧಾನ ಹೇಳಿಕೊಳ್ಳಲು ಆಗದೆ, ಕೊಟ್ಟಿರುವ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲು ಆಗದ ಅನೇಕ ಸಚಿವರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಸಿಎಂ ಬೊಮ್ಮಾಯಿ ಅವರು ತವರು ಜಿಲ್ಲೆಯನ್ನು ಬದಲಾಯಿಸಿ ಬೇರೊಂದು ಜಿಲ್ಲೆಯ ಉಸ್ತುವಾರಿ ನೀಡಿರುವುದಕ್ಕೆ ಎದ್ದಿರುವ ಅಸಮಾಧಾನ ಶಮನವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.
# ಎಚ್ಚರಿಕೆ ಹೆಜ್ಜೆ:
ಈಗ ಕೇವಲ ಉಸ್ತುವಾರಿಗಾಗಿ ಮುನಿಸಿಕೊಂಡರೆ ಮುಂದೆ ಸಂಪುಟ ಪುನಾರಚನೆಯಾಗುವ ವೇಳೆ ನಮ್ಮನ್ನು ಕೈಬಿಟ್ಟರೆ ಭವಿಷ್ಯದ ಗತಿಯೇನು ಎಂಬ ಚಿಂತೆಯೂ ಅನೇಕರನ್ನು ಕಾಡುತ್ತಿದೆ. ಈಗಾಗಲೇ ಶಾಸಕರ ಒಂದು ಬಣ ಸಂಪುಟ ಪುನಾರಚನೆಗೆ ಪಟ್ಟು ಹಿಡಿದಿದೆ. ಪ್ರತ್ಯೇಕ ಸಭೆಗಳು ಕೂಡ ಸರಣಿ ರೂಪದಲ್ಲಿ ನಡೆದಿದೆ. ಪುನಾರಚನೆಯಾದಾಗ ನಮ್ಮನ್ನು ಕೈಬಿಡಬಹುದೆಂಬ ಕಾರಣದಿಂದ ಬಹಿರಂಗವಾಗಿ ಯಾರೊಬ್ಬರು ಹೇಳಿಕೊಳ್ಳುತ್ತಿಲ್ಲ. ಒಂದು ರೀತಿ ಉಗಳಲು ಆಗದ, ನುಂಗಲು ಆಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡಿರುವ ಸಣ್ಣ ಕೈಗಾರಿಕಾ ಸಚಿವ ಎಂ.ಟಿ.ಬಿ.ನಾಗರಾಜ್ ಅವರು ಮೊದಲಿದ್ದ ಜಿಲ್ಲೆಯನ್ನೇ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾನು ಬಿಜೆಪಿಯನ್ನು ಸಂಘಟಿಸುವುದು ಕಷ್ಟವಾಗುತ್ತದೆ. ಚುನಾವಣಾ ವರ್ಷವಾಗಿರುವುದರಿಂದ ಒಂದು ಕಡೆ ಕ್ಷೇತ್ರ, ಮತ್ತೊಂದು ಕಡೆ ಉಸ್ತುವಾರಿ ಜಿಲ್ಲೆ ಹಾಗೂ ಪಕ್ಷ ಸಂಘಟನೆ ನೋಡಿಕೊಳ್ಳಬೇಕು. ನನಗೆ ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.
ಈಗಾಗಲೇ ಎಂಟಿಬಿ ನಾಗರಾಜ್ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ನೀಡಬೇಕೆಂದು ಅಭಿಯಾನವನ್ನು ಆರಂಭಿಸಿದ್ದಾರೆ. ಈವರೆಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಕೂಡ ತವರು ಜಿಲ್ಲೆ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದಾರೆ.
ಏಕಾಏಕಿ ಉಸ್ತುವಾರಿ ಬದಲಾವಣೆ ಮಾಡಿದ್ದರಿಂದ ಅಸಮಾಧಾನಗೊಂಡಿರುವ ಅವರು ಚಿಕ್ಕಬಳ್ಳಾಪುರವನ್ನೇ ತಮಗೆ ನೀಡಬೇಕೆಂದು ಸಿಎಂ ಹಾಗೂ ಪಕ್ಷದ ಮುಖಂಡರ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ. ತುಮಕೂರು ಜಿಲ್ಲೆ ಉಸ್ತುವಾರಿ ಜೊತೆಗೆ ಯಾವುದೇ ಜಿಲ್ಲೆಗೂ ಉಸ್ತುವಾರಿಯಾಗಿ ನೇಮಕಗೊಳ್ಳದೆ ಬರೀ ಸಚಿವ ಸ್ಥಾನಕ್ಕೆ ಸೀಮಿತಗೊಂಡಿರುವ ಮಾಧುಸ್ವಾಮಿ ಕೂಡ ಪರೋಕ್ಷವಾಗಿ ಅಸಮಾಧಾನವನ್ನೇ ವ್ಯಕ್ತಪಡಿಸಿದ್ದಾರೆ.
ಆದರೂ ತಮ್ಮ ಅಸಮಾಧಾನವನ್ನು ಹೊರ ಹಾಕದ ಸುಧಾಕರ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿಗಳ ತೀರ್ಮಾನವನ್ನು ನಾನು ಪ್ರಶ್ನಿಸುವುದಿಲ್ಲ. ಏನೇ ಮಾತನಾಡುವುದಿದ್ದರೆ ಪಕ್ಷದ ಚೌಕಟ್ಟಿನಲ್ಲಿಯೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
# ಅಸಮಾಧಾನವಿದೆ:
ನನಗೆ ತುಮಕೂರು ಜಿಲ್ಲೆ ಕೈ ತಪ್ಪಿದ್ದಕ್ಕೆ ಅಸಮಾಧಾನ ಇರುವುದು ನಿಜ. ಏಕಾಏಕಿ ಏಕೆ ಬದಲಾವಣೆ ಮಾಡಿದ್ದಾರೋ ನನಗೆ ಗೊತ್ತಿಲ್ಲ. ನನಗೆ ನೋವಿಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ. ನಾನು ಯಾರನ್ನೂ ಕೂಡ ದೂರಲು ಹೋಗುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಮ್ಮ ನೋವನ್ನು ಹೊರ ಹಾಕಿದ್ದಾರೆ.
ನನಗೆ ಉಸ್ತುವಾರಿ ಜಿಲ್ಲೆ ಕೈ ತಪ್ಪಿದ್ದನ್ನು ದೊಡ್ಡ ವಿಷಯ ಮಾಡಬೇಕಾದ ಅಗತ್ಯವಿಲ್ಲ. ಪಕ್ಷ ಹಾಗೂ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಈಗಲೂ ಬದ್ಧ. ಇದರಲ್ಲಿ ಪಿತೂರಿ ಅಥವಾ ರಾಜಕೀಯ ಷಡ್ಯಂತ್ರವಿದೆ ಎನ್ನುವುದಿಲ್ಲ ಎಂದು ಹೇಳುತ್ತಿಲ್ಲ ತಮ್ಮ ನೋವನ್ನು ಹೊರಹಾಕಿದ್ದಾರೆ.
ಉಸ್ತುವಾರಿ ಬದಲಾವಣೆ ಮಾಡಿ ಬೇರೊಂದು ಜಿಲ್ಲೆಯ ಹೊಣೆಗಾರಿಕೆಯನ್ನು ನೀಡುವುದಾಗಿ ಸ್ವತಃ ಸಿಎಂ ಅವರೇ ಹೇಳಿದ್ದರು. ನಾನು ಬೇರೆ ಜಿಲ್ಲೆಗೆ ಹೋಗಿ ಹೆಸರು, ಕೀರ್ತಿ ಹಾಗೂ ಪಕ್ಷದ ಸಂಘಟನೆ ಮಾಡುವಷ್ಟು ಸಾಮಥ್ರ್ಯ ನನ್ನಲ್ಲಿ ಇಲ್ಲ ಎಂದು ಹೇಳಿದ್ದೆ. ಹಾಗಾಗಿ ನನಗೆ ಉಸ್ತುವಾರಿಯನ್ನು ನೀಡಿಲ್ಲ. ಇದು ನನಗೇನೂ ಅಚ್ಚರಿ ತಂದಿಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ.
ವಿಜಯನಗರ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಸಚಿವ ಆನಂದ್ ಸಿಂಗ್ ಈಗಲೂ ಕೂಡ ತವರು ಜಿಲ್ಲೆಯನ್ನೇ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೇನೆ. ಅದರಲ್ಲೂ ವಿಜಯನಗರವನ್ನು ಜಿಲ್ಲಾ ಕೇಂದ್ರ ಮಾಡಬೇಕೆಂದು ಹೋರಾಟ ಮಾಡಿದ್ದೆ. ಈಗ ಉಸ್ತುವಾರಿ ಕೈ ತಪ್ಪಿರುವುದು ನೋವು ತಂದಿದೆ ಎಂದು ತಮ್ಮ ಬೆಂಬಲಿಗರ ಬಳಿ ನೋವು ಹಂಚಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಬೆಂಗಳೂರು ನಗರದ ಮೇಲೆ ಕಣ್ಣಿಟ್ಟಿದ್ದ ಅಶೋಕ್ ಸದ್ಯಕ್ಕೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲವಾದರೂ ಮುಖ್ಯಮಂತ್ರಿ ತೀರ್ಮಾನವನ್ನು ಪ್ರಶ್ನಿಸಲಾರೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಮಾತ್ರ ಮುಖ್ಯಮಂತ್ರಿಗಳ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಹೊಸ ಪ್ರಯೋಗ ಮಾಡಲಾಗಿದೆ. ತವರು ಜಿಲ್ಲೆಯನ್ನೇ ಉಸ್ತುವಾರಿ ನೀಡಿದರೆ ಪಕ್ಷ ಸಂಘಟನೆಗೆ ಅನುಕೂಲವಾಗುವುದಿಲ್ಲ ಎಂದು ಈ ರೀತಿ ಮಾಡಲಾಗಿದೆ.
ನನಗೆ ರಾಮನಗರ ಜಿಲ್ಲಾ ಉಸ್ತುವಾರಿ ನೀಡಬೇಕೆಂದು ನಾನೇನೂ ಕೇಳಿರಲಿಲ್ಲ. ಅಥವಾ ಡಿ.ಕೆ.ಸಹೋದರರ ವಿರುದ್ಧ ಹೋರಾಟ ನಡೆಸಲು ನನಗೆ ಕೊಟ್ಟಿಲ್ಲ. ಸರ್ಕಾರ ಏನು ಸೂಚಿಸುತ್ತದೆಯೋ ಅದನ್ನು ಮಾಡುವುದು ನನ್ನ ಕೆಲಸ ಎಂದು ಅಸಮಾಧಾನಿತರಿಗೆ ಟಾಂಗ್ ನೀಡಿದ್ದಾರೆ.
ಇದೇ ರೀತಿ ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ, ಶಂಕರ್ ಪಾಟೀಲ ಮುನೇನಕೊಪ್ಪ, ಮುರುಗೇಶ್ ನಿರಾಣಿ, ಕೆ.ಸಿ.ನಾರಾಯಣಗೌಡ, ಕೆ.ಎಸ್.ಈಶ್ವರಪ್ಪ ಸೇರಿದಂತೆ ಅನೇಕರು ತಮ್ಮ ತವರು ಜಿಲ್ಲೆ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದಾರೆ.
