Sunday, April 12, 2026
Homeಜಿಲ್ಲಾ ಸುದ್ದಿಗಳುಸೇತುವೆಗೆ ಅಪ್ಪಳಿಸಿ ಹೊತ್ತಿ ಉರಿದ ಕಾರು, ವ್ಯಕ್ತಿ ಸಜೀವ ದಹನ

ಸೇತುವೆಗೆ ಅಪ್ಪಳಿಸಿ ಹೊತ್ತಿ ಉರಿದ ಕಾರು, ವ್ಯಕ್ತಿ ಸಜೀವ ದಹನ

Car catches fire after crashing into bridge, man burnt alive

ಹುಳಿಯಾರು,ಏ.2- ಕಾರೊಂದು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಜೀವ ದಹನವಾಗಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಕೋರಗೆರೆ ಬಳಿ ನಡೆದಿದೆ.

ತಿಮನಹಳ್ಳಿ ಗ್ರಾಮದ ರಾಮಯ್ಯ (55) ಮೃತಪಟ್ಟ ದುರ್ದೈವಿ. ಬೆಳವಾಡಿ, ಹಾಗಲವಾಡಿ, ಬಿಳೆಕಲ್ಲು ಹಟ್ಟಿ ಗ್ರಾಮದ ಇತರ ನಾಲ್ವರೊಂದಿಗೆ ರಾಮಯ್ಯ ಅವರು ಅರಸೀಕೆರೆ ತಾಲ್ಲೂಕಿನ ಅಮನಹಟ್ಟಿ ಮಾಳಮ ದೇವಸ್ಥಾನಕ್ಕೆ ತೆರಳಿ ದರ್ಶನ ಮುಗಿಸಿ ಕಾರಿನಲ್ಲಿ ಮರಳುತ್ತಿದ್ದರು. ಕೋರಗೆರೆ ಸಮೀಪ ಕಾರು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ರಭಸಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.

ಕಾರಿನಲ್ಲಿ ಬೆಂಕಿ ಆವರಿಸುತ್ತಿದ್ದಂತೆ ಐದು ಮಂದಿ ಒಳಗಡೆ ಸಿಲುಕಿಕೊಂಡು ಕಿರುಚಾಡುತ್ತಿದ್ದರು. ಇದನ್ನು ಗಮನಿಸಿದ ದಾರಿಹೋಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಪ್ರಾಣದ ಹಂಗು ತೊರೆದು ಕಾರಿನ ಬಾಗಿಲುಗಳನ್ನು ಮುರಿದು ನಾಲ್ವರನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಅಷ್ಟರೊಳಗೆ ಬೆಂಕಿ ತೀವ್ರತೆಯಿಂದ ರಾಮಯ್ಯ ಅವರು ಕಾರಿನೊಳಗೇ ಸುಟ್ಟ ಗಾಯಗಳಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ತಕ್ಷಣವೇ ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ನೀರಿನ ಟ್ಯಾಂಕರ್‌ ತರಿಸಿ ಕಾರಿಗೆ ಹತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯ ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News