ಚಿಕ್ಕಮಗಳೂರು,ಮಾ.29- ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳು ಹಾಗೂ ಮಲೆನಾಡು ಭಾಗಗಳಲ್ಲಿ ಗುಡುಗು ಸಹಿತ ಮಳೆ ಸುರಿದಿದ್ದು ಕೆಲವು ದಿನಗಳಿಂದ ಬಿಸಿಲ ಬಗೆಗೆ ಕಾದ ಕಾವಲಿಯಂತಾಗಿದ್ದ ಇಳೆಗೆ ಬೇಸಿಗೆ ಮಳೆ ತಂಪೆರದಿದೆ.ಕಾಫಿನಾಡಿನ ಮಲೆನಾಡು ಭಾಗದಲ್ಲಿ ಹವಾಮಾನ ದಿಢೀರ್ ಬದಲಾಗಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ದಿನನಿತ್ಯದ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ನಗರಾದ್ಯಂತ ಬಿರುಗಾಳಿಯೊಂದಿಗೆ ಮಳೆ ಆರ್ಭಟಿಸುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಮಳೆಯ ತೀವ್ರತೆ ಹೆಚ್ಚಾಗಿದೆ.
ಆಲ್ಲೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಕಾಫಿ ತೋಟಗಳಿಗೆ ಇದು ನೆರವಾಗಿದ್ದರೂ ಬಿರುಗಾಳಿಯಿಂದ ಹಾನಿಯ ಭೀತಿ ವ್ಯಕ್ತವಾಗಿದೆ. ಮೂಡಿಗೆರೆ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ರಸ್ತೆಗಳು ನದಿಯಂತಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಮೂಡಿಗೆರೆ ಪಟ್ಟಣದಲ್ಲಿ ಪರಿಮಳಮ ದೇವಾಲಯದ ಬಳಿ ಕಾರಿನ ಮೇಲೆ ಮರ ಬಿದ್ದಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ತೆರವುಗೊಳಿಸಲಾಯಿತು. ಮೂಡಿಗೆರೆಯ ಬಸ್ ನಿಲ್ದಾಣದಲ್ಲಿರುವ ದೊಡ್ಡ ಮರ ಒಂದು ಬಿದ್ದು ಹಲವು ಬೈಕುಗಳು ಹಾನಿಯಾಗಿವೆ.
ಚರಂಡಿಗಳು ತುಂಬಿ ಹರಿಯುತ್ತಿದ್ದು, ಮಳೆ ನೀರು ರಸ್ತೆಗಳ ಮೇಲೆ ಹರಿಯುತ್ತಿರುವ ಕಾರಣ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದು, ಮಲೆನಾಡು ಭಾಗದ ಹಲವೆಡೆ ಮರಗಳು ಉರುಳುವ ಆತಂಕವೂ ಹೆಚ್ಚಾಗಿದೆ.
ಈ ಮಳೆ ಕಾಫಿ ತೋಟಗಳಿಗೆ ನೆರವಾಗಿದ್ದರೂ ಬಿರುಗಾಳಿಯಿಂದ ಹಾನಿಯ ಭೀತಿ ಮೂಡಿದೆ. ಒಟ್ಟಾರೆ, ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಚ್ಚರಿಕೆಯ ವಾತಾವರಣ ನಿರ್ಮಾಣವಾಗಿದೆ.
