ಬೆಂಗಳೂರು, ನ.2- ವಿಚ್ಛೇದಿತ ಮಹಿಳೆಯನ್ನು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ರೇಣುಕಾ (30) ಎಂದು ಗುರುತಿಸಲಾಗಿದ್ದು, ಈಕೆಯ ಪ್ರಿಯಕರ ಅಂಬೇಡ್ಕರ್ ಅಲಿಯಾಸ್ ಕುಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.ರೇಣುಕಾಗೆ ಒಬ್ಬ ಮಗನಿದ್ದು, ಕಳೆದ ಒಂದು ವರ್ಷದ ಹಿಂದೆ ಗಂಡನನ್ನು ಬಿಟ್ಟು ಕೆಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್‌ನಲ್ಲಿ ಪ್ರತ್ಯೇಕವಾಗಿ ಮನೆ ಮಾಡಿ ವಾಸವಾಗಿದ್ದರು.
ಈ ವೇಳೆ ಫೈನಾನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕುಟ್ಟಿಯ ಪರಿಚಯವಾಗಿದ್ದು, ಅದು ಪ್ರೇಮಕ್ಕೆ ತಿರುಗಿದೆ. ಕಾಲಕ್ರಮೇಣ ರೇಣುಕಾ ಟೈಮ್‌ಪಾಸ್‌ಗಾಗಿ ನನ್ನನ್ನು ಪ್ರೀತಿಸಬೇಡ. ಮದುವೆಯಾಗು ಎಂದು ಹೇಳಿದ್ದಾಳೆ.
ಇದಕ್ಕೆ ಕುಟ್ಟಿ ನಯವಾಗಿಯೇ ತಳ್ಳಿಹಾಕುತ್ತಿದ್ದ. ಇತ್ತೀಚೆಗೆ ಹೆಚ್ಚಿದ ಒತ್ತಡದಿಂದ ರೇಣುಕಾಳನ್ನು ಕೊಲೆ ಮಾಡಲು ಆತ ನಿರ್ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ನಿನ್ನೆ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದ ರೇಣುಕಾಳನ್ನು ಕರೆಸಿಕೊಂಡ ಕುಟ್ಟಿ ಪಿಳ್ಳಣ್ಣ ಗಾರ್ಡನ್‌ನ ಸರ್ಕಾರಿ ಶಾಲೆ ಬಳಿ ಕರೆದುಕೊಂಡು ಹೋಗಿ ಜಗಳ ಮಾಡಿದ್ದಾನೆ.
ಈ ವೇಳೆ ಪೂರ್ವ ಸಂಚಿನಂತೆ ತಂದಿದ್ದ ಚಾಕುವಿನಿಂದ ರೇಣುಕಾಳ ದೇಹಕ್ಕೆ ಆರುಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಆತಂಕಗೊಂಡು ಆತನನ್ನು ಹಿಡಿಯಲು ಪ್ರಯತ್ನಿಸಿದರೂ ಆತ ಅಲ್ಲಿಂದ ಪರಾರಿಯಾಗಿದ್ದ.
ಸುದ್ದಿ ತಿಳಿದ ಕೆಜಿ ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ರೇಣುಕಾಳನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ. ಮದುವೆಯಾಗುವಂತೆ ಒತ್ತಾಯ ಮಾಡಿದ್ದಕ್ಕೆ ಈಕೆಯನ್ನು ಕೊಲೆ ಮಾಡಲಾಗಿದೆ ಎಂದು ಮೃತಳ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ಕುರಿತಂತೆ ಪೊಲೀಸರು ಕುಟ್ಟಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸಾರ್ವಜನಿಕರ ಮುಂದೆಯೇ ಕೊಲೆ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೆಜಿ ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
