ಕಾಂಗ್ರೆಸ್ಸಿಗರ ವಿರುದ್ಧವೇ ರೊಚ್ಚಿಗೆದ್ದ ರಮ್ಯಾ..!

ಬೆಂಗಳೂರು, ಮೇ 12- ಮೌನವಾಗಿ ಇದ್ದದ್ದೇ ನನ್ನ ತಪ್ಪಾಗಿದೆ. ನಾನು ಪಕ್ಷಕ್ಕೆ ಎಂಟು ಕೋಟಿ ಹಣವನ್ನು ವಂಚನೆ ಮಾಡಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಈ ವಿಷಯವಾಗಿ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಂಸದೆ, ಮೋಹಕತಾರೆ ರಮ್ಯಾ ಒತ್ತಾಯಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯವಾಗಿರುವ ರಮ್ಯಾ, ನಿನ್ನೆ ಎಂ.ಬಿ.ಪಾಟೀಲ್ ಮತ್ತು ಸಚಿವ ಡಾ.ಸಿ.ಎನ್.ಅಶ್ವಥ್‍ನಾರಾಯಣ ಭೇಟಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು. ಅದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹಳಷ್ಟು ಮಂದಿ ರಮ್ಯಾ ಅವರನ್ನು ಲೇವಡಿ ಮಾಡಿ ಕೆಣಕಿದ್ದಾರೆ.

ಇಂದು ಹೊಸದಾಗಿ ಟ್ವೀಟ್ ಮಾಡಿರುವ ರಮ್ಯಾ, ನಾನು ಪಕ್ಷ ತೊರೆದ ಬಳಿಕ ರಮ್ಯಾ ಕಾಂಗ್ರೆಸ್‍ಗೆ 8 ಕೋಟಿ ರೂಪಾಯಿ ವಂಚಿಸಿ, ಓಡಿಹೋದಳು ಎಂಬ ಸುದ್ದಿಯನ್ನು ಕನ್ನಡ ವಾಹಿನಿಗಳಲ್ಲಿ ಬಿತ್ತರಿಸಿ, ನನ್ನ ವಿಶ್ವಾಸಾರ್ಹತೆಯನ್ನು ನಾಶಮಾಡುವ ಪ್ರಯತ್ನ ನಡೆಸಲಾಯಿತು. ನಾನು ಓಡಿಹೋಗಲಿಲ್ಲ, ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದೇನೆ. ನಾನು ಪಕ್ಷಕ್ಕೆ 8 ಕೋಟಿ ವಂಚನೆ ಮಾಡಿಲ್ಲ. ಮೌನವಾಗಿರುವುದೇ ನನ್ನ ತಪ್ಪಾಗಿದೆ ಎಂದು ಕಿಡಿಕಾರಿದ್ದಾರೆ.

ಕೆ.ಸಿ.ವೇಣುಗೋಪಾಲ್ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿದ್ದರು. ದಯವಿಟ್ಟು ನನ್ನ ಬಗ್ಗೆ ಈ ಆರೋಪಗಳಿಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ, ವೇಣುಗೋಪಾಲ್ ಜೀ ಅವರು ನನಗಾಗಿ ಮಾಡಬಹುದಾದ ಕನಿಷ್ಠ ಕೆಲಸ ಇದು ಎಂದಿರುವ ಆಕೆ, ಜೀವನದುದ್ದಕ್ಕೂ ನಾನು ಈ ನಿಂದನೆ ಮತ್ತು ಟ್ರೋಲ್‍ನೊಂದಿಗೆ ಬದುಕಬೇಕಿಲ್ಲ ಎಂದಿದ್ದಾರೆ.

ಇದಕ್ಕೂ ಮೊದಲು ಮತ್ತೆರಡು ಟ್ವೀಟ್ ಮಾಡಿರುವ ರಮ್ಯಾ, ನನಗೆ ಅವಕಾಶ ಕೊಟ್ಟವರು ಮತ್ತು ನನ್ನ ಪರವಾಗಿ ನಿಂತವರು ಯಾರಾದರೂ ಇದ್ದರೆ ಅದು ರಾಹುಲ್ ಗಾಂಧಿ ಮಾತ್ರ. ನನಗೆ ಅವಕಾಶಗಳನ್ನು ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಯಾರೇ ಆದರೂ ಅವಕಾಶವಾದಿಗಳು.

ಈ ಅವಕಾಶವಾದಿಗಳು ನನ್ನನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ ಮತ್ತು ನನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ನೀವು ಟಿವಿಯಲ್ಲಿ ನೋಡುವುದೆಲ್ಲವೂ ಅವರ ವಂಚಕ ಮನಸ್ಸನ್ನು ಮರೆಮಾಡಲು ಒಂದು ಪ್ರಯತ್ನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ನೇರ ವಾಗ್ಧಾಳಿ ನಡೆಸಿದ್ದಾರೆ.

2010ರಲ್ಲಿ ರಮ್ಯಾರನ್ನು ಕಾಂಗ್ರೆಸ್‍ಗೆ ಪರಿಚಯಿಸಿದ್ದು, ಸದಸ್ಯತ್ವ ಕೊಡಿಸಿದ್ದು ಡಿ.ಕೆ.ಶಿವಕುಮಾರ್. ಈಗ ಆಕೆ ಹತ್ತಿದ ಏಣಿಯನ್ನು ಒದೆಯುತ್ತಿದ್ದಾರೆ ಎಂಬ ಸಂದೇಶ ಇರುವ ಇಮೇಜ್ ಅನ್ನು ಕಾಂಗ್ರೆಸ್‍ನ ಎಲ್ಲಾ ಹಿರಿಯ ನಾಯಕರಿಗೆ, ಕಾರ್ಯಕರ್ತರಿಗೆ ರವಾನೆ ಮಾಡಲಾಗಿದೆ. ನನ್ನ ವಿರುದ್ಧ ಟ್ರೋಲ್ ಮಾಡಲು ಕೆಪಿಸಿಸಿ ಅಧ್ಯಕ್ಷರ ಕಚೇರಿಯಿಂದಲೇ ಸೂಚನೆ ಹೋಗಿದೆ ಎಂದು ರಮ್ಯಾ ಹೇಳಿಕೊಂಡಿದ್ದಾರೆ.