ಮಾಡೋದೆನ್ನೆಲ್ಲ ಮಾಡಿ ಆದಮೇಲೆ ಈಗೇಕೆ ಸರ್ವ ಪಕ್ಷ ಸಭೆ..? : ಡಿಕೆಶಿ

ಬೆಳಗಾವಿ, ಏ.9- ಕೊರೊನಾ ಸಂದರ್ಭದಲ್ಲಿ ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಪ್ರಮಾಣದ ಭ್ರಷ್ಟಚಾರ ನಡೆದಿದೆ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಡುವುದನ್ನೆಲ್ಲಾ ಮಾಡಿ ಈಗ ಯಾಕೆ ಸರ್ವ ಪಕ್ಷ ಸಭೆ ಕರೆಯುತ್ತಾರೆ ಎಂದು ಪ್ರಶ್ನಿಸಿದ್ದಾರೆ.  ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೀಪ ಹಚ್ಚಿ, ಜಾಗಟೆ ಹೊಡೆಯಿರಿ ಎಂದರು. ನಾವು ಅದನ್ನು ಮಾಡಿದೆವು. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿತ್ತು. ಅದನ್ನು ಯಾರಿಗೆ ಕೊಟ್ಟಿದ್ದಾರೆ. ಮೊದಲು ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಮಾಡಬಾರದನ್ನು ಮಾಡಿ ದೇಶವನ್ನು, ರಾಜ್ಯವನ್ನು ಲೂಟಿ ಮಾಡಿದ್ದಾರೆ. 16000 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಪ್ರಮಾಣದ ಭ್ರಷ್ಟಚಾರ ಇದು. ಕ್ಷೌರಿಕ, ಬಟ್ಟೆ ಸ್ವಚ್ಚಗೊಳಿಸುವ, ಚಾಲನಾ ವೃತ್ತಿ ಮಾಡುವವರಿಗೆ ಐದು ಸಾವಿರ ರೂಪಾಯಿ ಕೊಡುವುದಾಗಿ ಹೇಳಿದರು. ಬೇಕಾದರೆ ರಿಯಾಲಿಟಿ ಚೆಕ್ ಮಾಡಿ ನೋಡಿ, ಸರ್ಕಾರ ಘೋಷಿಸಿದ ಹಣ ಸರಿಯಾಗಿ ತಲುಪಿಲ್ಲ ಎಂದು ಹೇಳಿದರು.

Related Stories :
* ನಾಳೆಯಿಂದ ಕೊರೊನಾ ಕಫ್ರ್ಯೂ : ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಕಂಪ್ಲಿಟ್ ಡಿಟೇಲ್ಸ್..!
* 24 ಗಂಟೆಯಲ್ಲಿ 1.31 ಲಕ್ಷ ಮಂದಿಗೆ ಪಾಸಿಟಿವ್, 780 ಸಾವು..! ಭಾರತ ಈಗ ಕೊರೋನಾ ಹಾಟ್‌ಸ್ಪಾಟ್.!
* ಮಾಸ್ಕ್ ದಂಡದ ಪ್ರಮಾಣ ಹೆಚ್ಚಿಸಲು ಸರ್ಕಾರ ನಿರ್ಧಾರ…!

ರಾಜ್ಯದ 7 ಜಿಲ್ಲೆಗಳ 8 ನಗರಗಳಲ್ಲಿ ನೈಟ್ ಕಫ್ರ್ಯೂ ಜಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇಷ್ಟ ಬಂದ ರೀತಿಯಲ್ಲಿ ಸರ್ಕಾರ ನಿರ್ಣಯ ಕೈಗೊಳ್ಳುತಿದೆ. ಮಾಡಬಾರದನ್ನೆಲ್ಲಾ ಮಾಡಿ ದೇಶ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಈಗ ಸರ್ವ ಪಕ್ಷಗಳ ಸಭೆ ಕರೆಯುವುದಾಗಿ ಹೇಳುತ್ತಿದ್ದಾರೆ. ಯಾಕೆ ಬೇಕು ಆ ಸಭೆ ಎಂದು ಪ್ರಶ್ನಿಸಿದರು.  ಸರ್ಕಾರಿ ಬಸ್‍ಗಳಲ್ಲಿ ಪೂರ್ತಿ ಜನರನ್ನು ತುಂಬುತ್ತಿದ್ದರು. ಆದರೆ ಚಲನಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಸೀಟು ಭರ್ತಿ ಮಾಡಬೇಕು ಎಂದು ನಿಯಮ ಮಾಡಿದ್ದಾರೆ. ಚಿತ್ರರಂಗಕ್ಕೆ ತೆರಿಗೆಯೇನು ಕಡಿಮೆ ಮಾಡಿಲ್ಲ. ಇದರಿಂದ ಚಿತ್ರರಂಗಕ್ಕೆ ಅನ್ಯಾಯವಾಗುತ್ತದೆ ಎಂದು ಹೇಳಿದರು.

ಇವರಿಗೆ ಸರ್ಕಾರ ನಡೆಸಿ ಅನುಭವ ಇಲ್ಲ. ಹಾಗಾಗಿ ಮಾಡಬಾರದನ್ನೆಲ್ಲಾ ಮಾಡುತ್ತಿದ್ದಾರೆ. ಮನಸ್ಸಿಗೆ ಬಂದಂತೆ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ಸಾರಿಗೆ ನೌಕರ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಈ ರೀತಿ ಆದ್ರೆ ಬೇರೆ ಜಿಲ್ಲೆ ಪರಿಸ್ಥಿತಿ ಏನು ? ಸಾರಿಗೆ ನೌಕರರನ್ನು ಕರೆದು ಕೂರಿಸಿಕೊಂಡು ಮಾತನಾಡಿ, ಸಾರಿಗೆ ನೌಕರರನ್ನು ಕುಟುಂಬ ಸದಸ್ಯರಂತೆ ಟ್ರೀಟ್ ಮಾಡಿ. ಎಲ್ಲಾ ನೌಕರರ ಮೇಲೆ ಸಂಶಯ ಪಡಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ವಾತಾವರಣ ಇದೆ. ದುರಾಡಳಿತದ ಕೇಂದ್ರ ರಾಜ್ಯ ಸರ್ಕಾರಕ್ಕೆ ಸಂದೇಶ ನೀಡಲು ಜನ ಕಾಯುತ್ತಿದ್ದಾರೆ. ಬೆಳಗಾವಿಗೆ ಹೊರಗಡೆಯವರು ಬಂದು ರಾಜಕೀಯ ಮಾಡುವುದು ಸ್ಥಳೀಯ ಬಿಜೆಪಿ ನಾಯಕರಿಗೆ ಇಷ್ಟ ಆಗ್ತಿಲ್ಲ ಎಂದು ಹೇಳಿದರು.