ಡಿಕೆಶಿ ಬಂಧನ ಬಿಜೆಪಿಗಿಂತ ಕಾಂಗ್ರೆಸ್ ನಾಯಕರಿಗೆ ಸಂತೋಷ, ಮೇಲ್ನೋಟಕ್ಕೆ ಪ್ರತಿಭಟನೆ: ರೇಣುಕಾಚಾರ್ಯ

Spread the love

ಬೆಂಗಳೂರು,ಸೆ.4- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವುದಕ್ಕೆ ಬಿಜೆಪಿಗಿಂತ ಕಾಂಗ್ರೆಸ್ ನಾಯಕರೇ ಅತಿ ಹೆಚ್ಚು ಸಂತೋಷ ಪಡುತ್ತಿದ್ದಾರೆ. ಮೇಲ್ನೋಟಕ್ಕೆ ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದಕ್ಕೆ ನಾವೇನು ಖುಷಿಪಟ್ಟಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿದಂತೆ ಅನೇಕರು ಒಳಗೊಳಗೆ ಖುಷಿಯಾಗಿದ್ದಾರೆ. ಮೇಲ್ನೋಟಕ್ಕೆ ಮಾತ್ರ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಹಿಂದೆ ಲೋಕಾಯುಕ್ತ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಿದಾಗ ಕಾಂಗ್ರೆಸ್ ನಾಯಕರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ನಾವು ಅಂತಹ ಕೀಳುಮಟ್ಟದ ರಾಜಕಾರಣ ಮಾಡುತ್ತಿಲ್ಲ. ಇಡಿ ಸ್ವಾಯತ್ತ ಸಂಸ್ಥೆಯಾಗಿದ್ದು, ತನ್ನದೇ ಆದ ಕೆಲಸ ಮಾಡುತ್ತದೆ. ಇದಕ್ಕೂ ಬಿಜೆಪಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಯಾವುದೇ ತನಿಖೆ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾದ ಅಗತ್ಯ ವಿದೆ ಎಂಬುದು ಮನವರಿಕೆಯಾಗಿದ್ದ ರಿಂದ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅದಕ್ಕೂ ಬಿಜೆಪಿಗೂ ತಳಕು ಹಾಕುವುದು ಎಷ್ಟರಮಟ್ಟಿಗೆ ಸರಿ ಎಂದು ಹರಿಹಾಯ್ದರು.

ಶಿವಕುಮಾರ್ ಏನೂ ತಪ್ಪು ಮಾಡಿಲ್ಲ ಎಂದರೆ ನ್ಯಾಯಾಲಯ ಕ್ಲೀನ್‍ಚಿಟ್ ಕೊಡಲಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಅನೇಕ ನಾಯಕರನ್ನು ಬಂಧಿಸಲಾಗಿತ್ತು. ನಾವು ಅಂದು ಯಾವುದೇ ತನಿಖಾ ಸಂಸ್ಥೆಗಳ ವಿರುದ್ಧ ಬೊಟ್ಟು ಮಾಡಿರಲಿಲ್ಲ. ದೇಶದ ಪ್ರತಿಯೊಬ್ಬ ಪ್ರಜೆಗೂ ಕಾನೂನು ಎಲ್ಲರಿಗೂ ಒಂದೇ ಎಂಬುದು ಅರ್ಥವಾಗಬೇಕು. ನಾವು ಕೂಡ ವಿಚಾರಣೆಗಳನ್ನು ಎದುರಿಸಿದ್ದೇವೆ.

ಯಾವುದೇ ತನಿಖಾ ಸಂಸ್ಥೆಗಳ ವಿರುದ್ದ ಪ್ರತಿಭಟನೆ ಮಾಡುವುದಾಗಲಿ, ಟೈರ್‍ಗೆ ಬೆಂಕಿ ಹಚ್ಚುವುದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡಿಲ್ಲ. ಕಾಂಗ್ರೆಸ್ ನಾಯಕರು ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ಟೀಕೆ ಮಾಡುವ ಮೊದಲು ನೀವು ಅಧಿಕಾರದಲ್ಲಿದ್ದಾಗ ಯಾವ ರೀತಿ ನಡೆದುಕೊಂಡಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದರು.

ವೈಯಕ್ತಿಕವಾಗಿ ನನಗೂ ಕೂಡ ಡಿಕೆಶಿ ಆತ್ಮೀಯರು. ಕಾನೂನು ಹೋರಾಟದಲ್ಲಿ ಅವರು ಗೆದ್ದುಬರಲಿ ಎಂದು ಆಶಿಸುತ್ತೇನೆ. ಅವರು ಆದಷ್ಟು ಬೇಗ ಆರೋಪ ಮುಕ್ತರಾಗಿ ರೇಣುಕಾಚಾರ್ಯ ಹೇಳಿದರು.