ಹೈಕಮಾಂಡ್ ಮುಂದೆ ಡಿ.ಕೆ.ಶಿವಕುಮಾರ್ ಸಿಡಿಮಿಡಿ..!

Spread the love

ಬೆಂಗಳೂರು, ಜ.9- ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲು ಮೀನಾಮೇಷ ಎಣಿಸುತ್ತಿರುವ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಸಮಾದಾನ ವ್ಯಕ್ತ ಪಡಿಸಿದ್ದಾರೆ. ಕೋರ್ಟ್ ಕೇಸುಗಳ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ದೆಹಲಿಯಲ್ಲಿದ್ದ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಇತರ ನಾಯಕರನ್ನು ಭೇಟಿ ಮಾಡಿದ್ದರು.

ಈ ಸಂದರ್ಭದಲ್ಲಿ ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಡ. ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಸ್ಥಾನ ಅಥವಾ ಎಐಸಿಸಿಯ ಕಾರ್ಯಕಾರಿ ಸಮಿತಿ ಸದಸ್ಯರಾಗುವಂತೆ ವೇಣುಗೋಪಾಲ್ ಅವರು ಡಿ.ಕೆ.ಶಿವಕುಮಾರ್ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಡಿ.ಕೆ.ಶಿವಕುಮಾರ್ ಅವರು ನಾನು ಎರಡನೆ ಸಾಲಿನ ನಾಯಕನಲ್ಲ.

ನೀವು ಕೊಟ್ಟಿದ್ದು ತೆಗೆದುಕೊಳ್ಳುವ ಕಾಲ ಹೋಗಿದೆ. ಕೊಡುವುದಾದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಹೈಕಮಾಂಡ್ ಕೊಡಲಿ. ಇಲ್ಲವಾದರೆ ಏನೂ ಬೇಡ. ಇನ್ನು ಮೇಲೆ ನನ್ನ ಪಾಡಿಗೆ ನಾನೀರುತ್ತೇನೆ. ಪದೇ ಪದೇ ಪಕ್ಷದ ಕೆಲಸಗಳನ್ನು ಹೇಳುವ ಪ್ರಯತ್ನ ಮಾಡಬೇಡಿ. ನಿಮಗೆ ಪ್ರೀಯರಾದ ನಾಯಕರಿಂದಲೇ ಎಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳಿ ಎಂದು ಸ್ಪಷ್ಟವಾಗಿ ತಿರುಗೇಟು ನೀಡಿದ್ದಾರೆ.

ಹೈಕಮಾಂಡ್ ಮುಂದೆ ನಾನು ಯಾವುದೇ ಹುದ್ದೆಗೆ ಬೇಡಿಕೆ ಇಟ್ಟಿರಲಿಲ್ಲ. ವರಿಷ್ಠರೇ ಪ್ರಮುಖ ಹುದ್ದೆಗಳ ಪ್ರಸ್ತಾಪ ಮಾಡಿದರು. ಈವರೆಗೂ ನಾನು ಕಾಂಗ್ರೆಸ್‍ನಲ್ಲಿ ಅಧಿಕಾರಕ್ಕಾಗಿ ಲಾಬಿ ಮಾಡಿಲ್ಲ ಮತ್ತು ಬೇರೆಯವರಿಗೆ ಅವಕಾಶ ನೀಡುವಾಗಲೂ ಅಡ್ಡಿ ಪಡಿಸಿಲ್ಲ. ಪಕ್ಷದ ವಿಷಯದಲ್ಲಿ ನನಗಿರುವ ನಿಷ್ಠೆ ಪ್ರಶ್ನಾತೀತ. ಪಕ್ಷಾಂತರ ಮಾಡಿದ್ದರೆ ನಾನು ಕಾನೂನಿನ ಸಮಸ್ಯೆಗಳನ್ನು ಎದುರಿಸಬೇಕಿರಲಿಲ್ಲ. ಜೊತೆಗೆ ಉತ್ತಮ ಅಧಿಕಾರವೂ ಸಿಗುತ್ತಿತ್ತು ಎಂದು ಡಿ.ಕೆ.ಶಿವಕುಮಾರ್ ಖಾರವಾಗಿ ಹೇಳಿದ್ದಾರೆ.

ಬೇರೆಯವರಿಗೆ ನಾನು ಅಡ್ಡಿ ಪಡಿಸಿಲ್ಲ ಎನ್ನುವುದಾದರೆ, ನನಗೆ ಅವಕಾಶಗಳು ಬಂದಾಗ ಬೇರೆಯವರು ಯಾಕೆ ಅಡ್ಡ ನಿಲ್ಲಬೇಕು. ನನಗೆ ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ಗೊತ್ತಿದೆ. ಅನಗತ್ಯವಾಗಿ ಮಾತನಾಡಿ ಗೊಂದಲ ಸೃಷ್ಟಿಸಬಾರದೆಂದು ಸುಮ್ಮನಿದ್ದೇನೆ. ನನ್ನ ಮೇಲಿರುವ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆಯ ಪ್ರಕರಣಗಳು ರಾಜಕೀಯ ಪ್ರೇರಿತ ಎಂದು ಎಲ್ಲರಿಗೂ ಗೊತ್ತಿದೆ. ಆದರೂ ಅದನ್ನು ಮುಂದಿಟ್ಟುಕೊಂಡು ನೆಪ ಹೇಳುತ್ತಿರುವುದು ಸರಿಯಲ್ಲ.

ಕೊಡುವುದಾದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ಎರಡರಲ್ಲಿ ಒಂದನ್ನು ಕೊಡಿ. ಯಾರದೋ ಮರ್ಜಿ, ದಾಕ್ಷಿಣ್ಯದಿಂದ ಕೊಡುವುದಾದರೆ ಬೇಡ ಎಂದು ನಿಷ್ಟೂರವಾಗಿ ಹೇಳಿದ್ದಾರೆ ಎನ್ನಲಾಗಿದೆ. ಡಿ.ಕೆ.ಶಿವಕುಮಾರ್ ಅವರ ಖಡಕ್ ಮಾತುಗಳಿಂದ ಮುಜುಗರಕ್ಕೆ ಒಳಗಾದ ವೇಣುಗೋಪಾಲ್ ಅವರು, ಬೇಸರ ಮಾಡಿಕೊಳ್ಳಬೇಡಿ.

ವರಿಷ್ಠರು ಹಿರಿಯ ನಾಯಕರ ಜೊತೆ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಮಾಧಾನದ ಮಾತುಗಳಿಗೆ ಕಿವಿ ಕೊಡದೆ ಡಿ.ಕೆ.ಶಿವಕುಮಾರ ಎದ್ದು ಬಂದಿದ್ದಾರೆ ಎನ್ನಲಾಗಿದೆ.

ಡಿ.ಕೆ.ಶಿವಕುಮಾರ್ ಇನ್ನೇನು ಕೆಪಿಸಿಸಿ ಅಧ್ಯಕ್ಷರಾಗಿಯೇ ಬಿಟ್ಟರು ಎನ್ನುವ ಸಂದರ್ಭದಲ್ಲಿ ರಾಜ್ಯದ ಕೆಲವು ಹಿರಿಯ ನಾಯಕರು ಅಡ್ಡಲಾಗಿ ನಿಂತಿದ್ದಾರೆ. ಜಾರಿ ನಿರ್ದೇಶನಾಲಯ ಮತ್ತೆ ಶಿವಕುಮಾರ್ ಅವರಿಗೆ ನೋಟಿಸ್ ನೀಡಿದೆ. ಮುಂದಿನ ವಿಚಾರಣೆಯಲ್ಲಿ ಪ್ರಕರಣ ಯಾವ ತಿರುವು ಪಡೆದು ಕೊಳ್ಳಬಹುದೋ… ಏನೋ ಕಾದು ನೋಡಬೇಕು. ಸದ್ಯಕ್ಕೆ ಪ್ರಮುಖ ಹುದ್ದೆಗೆ ನೇಮಿಸುವಾಗ ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಸೂಕ್ತ ಎಂದು ಕೆಲವು ನಾಯಕರು ಹೈಕಮಾಂಡ್‍ಗೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಹೊಸ ವರ್ಷಕ್ಕೆ ಘೋಷಣೆಯಾಗಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತೆ ಸಂಕ್ರಾಂತಿಗೆ ಮುಂದೂಡಿಕೆಯಾಗಿದೆ. ಇದು ಡಿ.ಕೆ.ಶಿವಕುಮಾರ್ ಅವರ ಸಿಡಿಮಿಡಿಗೆ ಕಾರಣವಾಗಿದೆ.

Facebook Comments