ಮನೋಜ್‍ಚೌಧರಿ ಭೇಟಿಗೆ ಅವಕಾಶ ಮಾಡಿಕೊಡುವಂತೆ ಪೊಲೀಸರಲ್ಲಿ ಡಿಕೆಶಿ ಮನವಿ

Spread the love

ಬೆಂಗಳೂರು,ಮಾ.13- ಮಧ್ಯಪ್ರದೇಶದ ಶಾಸಕ ಹಾಗೂ ತಮ್ಮ ಪುತ್ರ ಮನೋಜ್ ಚೌಧರಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುವಂತೆ ಅವರ ತಂದೆ ನಾರಾಯಣ ಸಿಂಗ್ ಚೌಧರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಲ್ಲಿ ಮನವಿ ಮಾಡಿದ್ದಾರೆ.

ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಕೃಷ್ಣಭೈರೇಗೌಡ, ಶಾಸಕರಾದ ರಿಜ್ವಾನ್ ಅರ್ಷದ್ ಸೇರಿದಂತೆ ಅನೇಕ ಸ್ಥಳೀಯ ನಾಯಕರ ಜೊತೆ ಹಾಗೂ ಮತ್ತವರ ಪುತ್ರ-ಚೀತು ಪಟ್ವಾರಿ ಹಾಗೂ ಬಲರಾಮ್ ಚೌಧರಿ ಅವರುಗಳ ಜೊತೆ ಇಂದು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ, ಲಿಖಿತ ಮನವಿ ಸಲ್ಲಿಸಿರುವ ಅವರು, ತಮ್ಮ ಪುತ್ರನ ಭೇಟಿಗೆ ಅವಕಾಶ ಮಾಡಿಕೊಡುವಂತೆ ಕೋರಿದ್ದಾರೆ.

ತಮ್ಮ ಪುತ್ರನನ್ನು ಬಲವಂತವಾಗಿ ಬೆಂಗಳೂರಿಗೆ ಕರೆತಂದು ಕೂಡಿ ಹಾಕಲಾಗಿದೆ. ಆತ ನಮಗೆ ಕರೆ ಮಾಡಿ ತಾನಿರುವ ಸ್ಥಳ ತಿಳಿಸಿದ್ದು, ತನ್ನನ್ನು ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ನಾನು, ಚೀತುಪಟ್ವಾರಿ, ಬಲರಾಮ್ ಚೌಧರಿ ಅವರು ಭೂಪಾಲ್‍ನಿಂದ ಬೆಂಗಳೂರಿಗೆ ಬಂದಿದ್ದೇವೆ.

ನಿನ್ನೆ ರೆಸಾರ್ಟ್ ಬಳಿ ಹೋಗಿ ಮನೋಜ್ ಚೌಧರಿಯನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ ಕೆಲವು ಸ್ಥಳೀಯ ಬಿಜೆಪಿ ನಾಯಕರು ಅಡ್ಡಿಪಡಿಸಿದ್ದಾರೆ. ಸ್ಥಳೀಯ ಪೊಲೀಸರು ವಿನಾಕಾರಣ ನಮ್ಮನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಾವು ಯಾವುದೇ ದೌರ್ಜನ್ಯ, ದಬ್ಬಾಳಿಕೆ ಮಾಡಲು ಬಂದಿಲ್ಲ. ನಮ್ಮ ಪುತ್ರನ ಕರೆಯ ಮೇರೆಗೆ ಆತನನ್ನು ಭೇಟಿ ಮಾಡಲು ಬಂದಿದ್ದೇವೆ. ಆದರೆ ಇದಕ್ಕೆ ಸ್ಥಳೀಯ ಬಿಜೆಪಿ ನಾಯಕರು ಮತ್ತು ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Facebook Comments