ಡಿಕೆ ಸಹೋದರರಿಗೆ ಮತ್ತೊಮ್ಮೆ ಸಂಕಷ್ಟ, ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್

Spread the love

ಬೆಂಗಳೂರು, ನ.21- ಕಳೆದ ತಿಂಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಡಿಕೆ ಸಹೋದರರಿಗೆ ನೋಟಿಸ್ ನೀಡಿದೆ. ನೋಟಿಸ್ ಬಂದಿರುವುದನ್ನು ಖಚಿತಪಡಿಸಿರುವ ಡಿ.ಕೆ.ಶಿವಕುಮಾರ್ ಅವರು, ನ.19ರಂದು ಸಿಬಿಐನಿಂದ ಸಮನ್ಸ್ ಬಂದಿದೆ. ನ.23ರಂದು ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಆ ಸಂದರ್ಭದಲ್ಲಿ ನಾನು ಉತ್ತರ ಕರ್ನಾಟಕ ಪ್ರವಾಸಕ್ಕೆ ಹೋಗಬೇಕಾಗಿರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದೇನೆ.

ಅದರ ಬದಲಾಗಿ ನ.25ಕ್ಕೆ ಬರುವುದಾಗಿ ತಿಳಿಸಿದ್ದು, ಸಿಬಿಐ ಅಕಾರಿಗಳು ಅದಕ್ಕೆ ಸಮ್ಮತಿಸಿದ್ದೇನೆ. ಅಂದು ತಾವು ಬೆಂಗಳೂರಿನಲ್ಲಿರುವ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಅ.5ರಂದು ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿಯಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಸಿಬಿಐ ಅಕಾರಿಗಳು ಶೋಧಕಾರ್ಯಾಚರಣೆ ನಡೆಸಿದ್ದರು.

ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಈ ದಾಳಿ ನಡೆದಿದ್ದು, ಹಲವು ಅನುಮಾಗಳಿಗೆ ಕಾರಣವಾಗಿತ್ತು. ಬೆಂಗಳೂರು, ದೆಹಲಿ, ಮಹಾರಾಷ್ಟ್ರ ಸೇರಿದಂತೆ 14 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದ ಸಿಬಿಐ ಅಕಾರಿಗಳು ಇಡೀ ದಿನ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಮನೆ ಮೇಲೂ ದಾಳಿಯಾಗಿತ್ತು.

ಸುದೀರ್ಘ ಪರಿಶೀಲನೆ ಬಳಿಕ ಸಂಜೆ ವೇಳೆಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಪರಿಶೀಲನೆ ವೇಳೆ 57 ಲಕ್ಷ ನಗದು ಸೇರಿದಂತೆ 74.93ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ತಿಳಿಸಿತ್ತು. ದಾಳಿಯನ್ನು ವಿರೋಸಿ ಡಿ.ಕೆ.ಶಿವಕುಮಾರ್ ಮನೆ ಮುಂದೆ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಏಕಾಏಕಿ ಸಮಾವೇಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿ.ಕೆ.ಶಿವಕುಮಾರ್ ಅಭಿಮಾನಿಗಳು, ಸಿಬಿಐ ದಾಳಿ ವಿರೋಸಿ ಪ್ರತಿಭಟನೆ ನಡೆಸಿದ್ದರು.

ದಾಳಿಯಾದ ಸರಿಸುಮಾರು ಒಂದೂವರೆ ತಿಂಗಳ ಬಳಿಕ ಸಿಬಿಐ ಅಕಾರಿಗಳು ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರಿಗೆ ಸಮನ್ಸ್ ನೀಡಿದ್ದಾರೆ. ಆದರೆ, ಸಿಬಿಐ ಸಮನ್ಸ್ ನೀಡುವ ಮುನ್ನವೇ ಡಿ.ಕೆ.ಶಿವಕುಮಾರ್ ಅವರ ಪ್ರವಾಸ ಕಾರ್ಯಕ್ರಮ ನಿಗದಿಯಾಗಿತ್ತು. ಹೀಗಾಗಿ ನ.23ರ ಬದಲಾಗಿ ನ.25ಕ್ಕೆ ವಿಚಾರಣೆಗೆ ಬರುವುದಾಗಿ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ರಾಜಕೀಯವಾಗಿ ಡಿ.ಕೆ.ಶಿವಕುಮಾರ್ ಪ್ರಬುದ್ಧಮಾನಕ್ಕೆ ಬಂದಂತೆಲ್ಲಾ ಒಂದಲ್ಲಾ ಒಂದು ಕಂಟಕಗಳು ಎದುರಾಗುತ್ತಲೇ ಇವೆ. 2017ರ ಆಗಸ್ಟ್‍ನಲ್ಲಿ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ದಾಳಿಯಾಗಿತ್ತು. ಅದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡು 2019ರ ಸೆಪ್ಟೆಂಬರ್‍ನಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಬಂಸಿತ್ತು. ಸರಿಸುಮಾರು 48 ದಿನ ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಡಿ.ಕೆ.ಶಿವಕುಮಾರ್ ಅವರು ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ಆದಾಯ ತೆರಿಗೆ ಮತ್ತು ಜಾರಿನಿರ್ದೇಶನಾಲಯದ ಪ್ರಕರಣಗಳ ನಡುವೆ ಸಿಬಿಐ ತನಿಖೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ ಸಿಬಿಐ ದಾಳಿಯಾಗಿದೆ. ಈಗ ವಿಚಾರಣೆಗೂ ಸಮನ್ಸ್ ಜಾರಿಯಾಗಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಡಿ.ಕೆ.ಶಿವಕುಮಾರ್ ತಮ್ಮ ಪುತ್ರಿ ಐಶ್ವರ್ಯ ಅವರ ನಿಶ್ಚಿತಾರ್ಥ ನಡೆಸಿದರು.

Facebook Comments