ಸ್ಥಳೀಯ ಹೋರಾಟಕ್ಕೆ ಕರೆ ನೀಡಿದ ಡಿಕೆಶಿ

ಬೆಂಗಳೂರು, ಡಿ.31- ಕಾಂಗ್ರೆಸ್ ಕಾರ್ಯಕರ್ತರಿಗೆ 2021 ಹೋರಾಟದ ವರ್ಷ ಎಂದು ಘೋಷಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರತಿ ಕ್ಷೇತ್ರದಲ್ಲೂ ಸ್ಥಳೀಯವಾಗಿರುವ ಸಮಸ್ಯೆಗಳನ್ನು ಗುರುತಿಸಿ ಪಟ್ಟಿ ಮಾಡಿ ಹೋರಾಟ ನಡೆಸಬೇಕು ಮತ್ತು ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಜನರಿಗೆ ಹೊಸ ವರ್ಷದ ಶುಭಾಶಯ ಹೇಳಿದರು.

ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಇದು ಕೆಪಿಸಿಸಿ ಅಧ್ಯಕ್ಷನಾಗಿ ನನಗೆ ಸಮಾಧಾನ ತಂದಿದೆ. ಪಂಚಾಯಿತಿ ಸದಸ್ಯರನ್ನು ಪಕ್ಷದ ನೆಲೆಯಲ್ಲಿ ಗುರುತಿಸಬಾರದು ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ. ಆದಾಗ್ಯೂ ಕೆಲವು ಕಡೆ ಪಕ್ಷದ ಕಾರ್ಯಕರ್ತರೆಂದು ಹೇಳುತ್ತಿರುವುದು ಕಂಡುಬರುತ್ತಿದೆ. ನಾನು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ವರದಿ ಪಡೆದುಕೊಳ್ಳುತ್ತಿದ್ದೇನೆ.

ಎಲ್ಲ ಕಡೆ ಉತ್ತಮ ಫಲಿತಾಂಶ ಬಂದಿದೆ. ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿದ್ದಾರೆ. ಬಿಜೆಪಿಯವರು ತಾವು ಹೆಚ್ಚು ಸ್ಥಾನ ಗೆದ್ದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಯಾವ ಆಧಾರದ ಮೇಲೆ ಚುನಾಯಿತ ಸದಸ್ಯರನ್ನು ಪಕ್ಷದ ಕಾರ್ಯಕರ್ತರೆಂದು ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು. ಪಂಚಾಯಿತಿಗಳಲ್ಲಿ ಯಾರು ಅಧ್ಯಕ್ಷರಾಗುತ್ತಾರೋ ಎಂಬುದನ್ನು ಆಧರಿಸಿ ಪಕ್ಷದ ಬಲಾಬಲ ನಿರ್ಧರಿಸಬಹುದು. ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿ ಮೀಸಲಾತಿಯನ್ನು ತಿರುಚುವ ಮೂಲಕ ಗ್ರಾಪಂಗಳಲ್ಲೂ ಅಧಿಕಾರ ಹಿಡಿಯುವ ಪ್ರಯತ್ನ ನಡೆಸುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ. ಪಂಚಾಯಿತಿಗಳಲ್ಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಪಕ್ಷ ಅಧಿಕಾರದಲ್ಲಿದ್ದಾಗ ಉಪಚುನಾವಣೆಯಲ್ಲಿ ಗೆಲ್ಲುವುದು ಸಾಮಾನ್ಯ. ಈ ಮೊದಲು ಕಾಂಗ್ರೆಸ್ ಸರ್ಕಾರ ಇದ್ದಾಗ ನಂಜನಗೂಡು, ಬಳ್ಳಾರಿ ಉಪಚುನಾವಣೆ ಸೇರಿದಂತೆ ಹಲವಾರು ಕಡೆ ನಾವು ಗೆದ್ದಿದ್ದೆವು. ನಂತರ ಫಲಿತಾಂಶ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ದೊಡ್ಡದಾಗಿ ವರದಿಯಾಗುತ್ತಿದೆ. ಇಡೀ ಕ್ಷೇತ್ರದಲ್ಲಿ ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡುವ ಸಾಮಥ್ರ್ಯ ನನಗಿದೆ. ಆದರೆ, ವಿರೋಧ ಪಕ್ಷವೂ ಇರಬೇಕು ಎಂಬ ಕಾರಣಕ್ಕಾಗಿ ನಾವೇ ಸುಮ್ಮನಾಗಿದ್ದೆವು. ಒಂದಿಬ್ಬರು ಗೆದ್ದಾಕ್ಷಣ ಅದನ್ನು ಹಿನ್ನಡೆ ಎಂದು ಹೇಳಲಾಗುತ್ತಿದೆ. ಬೇಕಿದ್ದರೆ ಯಾರಾದರೂ ಬಂದು ಕ್ಷೇತ್ರದಲ್ಲಿ ಸಮೀಕ್ಷೆ ಮಾಡಲಿ. ನಾವೇ ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದರು.

ಬಿಜೆಪಿ ಸರ್ಕಾರ ಎಲ್ಲ ರಂಗಗಳಲ್ಲೂ ವೈಫಲ್ಯ ಅನುಭವಿಸಿದೆ. ಕೊರೊನಾ ಸಂದರ್ಭದಲ್ಲಿ ಯಾರಿಗೂ ಸಹಾಯ ಮಾಡಿಲ್ಲ. ಕೈಗಾರಿಕೋದ್ಯಮಿಗಳು, ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಿದ್ದೇವೆ ಎಂದು ದೊಡ್ಡದಾಗಿ ಪಟ್ಟಿ ಓದುತ್ತಾರೆ. ಆದರೆ, ಯಾರೂ ಕೂಡ ಸರ್ಕಾರದಿಂದ ನಮಗೆ ಸಹಾಯ ಆಗಿದೆ ಎಂದು ಸಮಾಧಾನದಿಂದ ಹೇಳುತ್ತಿಲ್ಲ ಎಂದರು.

2020 ದೇಶಕ್ಕಷ್ಟೇ ಅಲ್ಲ ಜಗತ್ತಿಗೇ ನರಕ ತೋರಿಸಿದೆ. 2021ರಲ್ಲಾದರೂ ಒಳ್ಳೆಯ ದಿನಗಳು ಬರಲಿ. ಕೊರೊನಾದಿಂದಾಗಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿಲ್ಲ. ಆನ್‍ಲೈನ್ ಶಿಕ್ಷಣ ಸಮಾಧಾನಕರವಾಗಿಲ್ಲ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಭಾರೀ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಾದರೂ ಭವಿಷ್ಯದ ಪ್ರಜೆಗಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂದು ಅವರು ಹಾರೈಸಿದರು.