ನವದೆಹಲಿ,ಜು.30- ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ಕುರಿತ ತೀರ್ಪನ್ನು ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಆ.2ರಂದು ಪ್ರಕಟಿಸುವುದಾಗಿ ತಿಳಿಸಿದೆ.
ಈ ಮೊದಲು 2017ರಲ್ಲಿ ನಡೆದಿದ್ದ ಆದಾಯ ತೆರಿಗೆ ಇಲಾಖೆ ದಾಳಿ ಆಧರಿಸಿ ಲಭ್ಯವಾದ ಮಾಹಿತಿಗಳ ಅನುಸಾರ ಇಡಿ ಪ್ರಕರಣ ದಾಖಲಿಸಿತ್ತು. ಐದು ದಿನಗಳ ಕಾಲ ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿತ್ತು.
2019ರ ಸೆಪ್ಟೆಂಬರ್ 3ರಂದು ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಸುಮಾರು 58 ದಿನಗಳ ಬಳಿಕ ದೆಹಲಿ ಹೈಕೋರ್ಟ್ ಅಕ್ಟೋಬರ್ನಲ್ಲಿ ಜಾಮೀನು ನೀಡಿತು. ಆದರೆ ಷರತ್ತುಬದ್ದ ಜಾಮೀನು ನೀಡಲು ಜಾರಿ ನಿರ್ದೇಶನಾಲಯ ವಿರೋಧ ವ್ಯಕ್ತಪಡಿಸಿತು. ಮೇ ತಿಂಗಳಿನಲ್ಲಿ ಪ್ರಕರಣದ ತನಿಖೆ ನಡೆಸಿ ಐವರು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.
ಡಿ.ಕೆ.ಶಿವಕುಮಾರ್ ಜೊತೆ ಸಚಿನ್ ನಾರಾಯಣ, ಸುನೀಲ್ಕುಮಾರ್ ಶರ್ಮ, ಹನುಮಂತಯ್ಯ ಅವರುಗಳ ವಿರುದ್ಧವೂ ಆರೋಪ ಕೇಳಿಬಂದಿದೆ.ಆ.2ರಂದು ತೀರ್ಪು ಪ್ರಕಟವಾಗುವ ವೇಳೆ ಎಲ್ಲ ಪ್ರತಿವಾದಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕೆಂದು ಸೂಚಿಸಲಾಗಿದೆ.
ಒಂದು ವೇಳೆ ನ್ಯಾಯಾಲಯ ಷರತ್ತುಬದ್ದ ಜಾಮೀನನ್ನು ನಿರಾಕರಿಸಿದರೆ ಬಂಧನವಾಗುವ ಸಾಧ್ಯತೆ ಇದೆ. ಇಲ್ಲವಾದರೆ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ನಿಟ್ಟುಸಿರು ಬಿಡುವಂತಾಗುತ್ತದೆ.