ಇದು ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್‍ಡೌನ್ : ಡಿಕೆಶಿ

Social Share

ಬೆಂಗಳೂರು,ಜ.5- ಕಾಂಗ್ರೆಸ್ ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರ ಜನರಿಗಾಗಿ ಕಠಿಣ ನಿಯಮಗಳನ್ನು ಜಾರಿಗೆ ತಂದಿಲ್ಲ. ತನ್ನ ಪಕ್ಷದ ಹಿತದೃಷ್ಟಿಗಾಗಿ ಕಾನೂನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ನಡೆದ ಸಭೆಯನ್ನು ನಾನು ಗಮನಿಸಿದ್ದೇನೆ. ಅದು ಕೊರೊನಾ ಕಫ್ರ್ಯೂ ಅಥವಾ ಕೊರೊನಾ ಲಾಕ್‍ಡೌನ್ ಅಲ್ಲ. ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್‍ಡೌನ್ ಎಂದು ಟೀಕಿಸಿದರು. ಇತ್ತೀಚಿನ ಚುನಾವಣೆಗಳಲ್ಲಿ ಜನ ಬಿಜೆಪಿಗೆ ಕಠಿಣ ಉತ್ತರ ನೀಡಿದ್ದಾರೆ. ಅದಕ್ಕಾಗಿ ಸರ್ಕಾರ ಪಕ್ಷದ ಹಿತದೃಷ್ಟಿಯಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ.
ಇದು ಜನರಿಗಾಗಿ ತಂದ ನಿಯಮಗಳಲ್ಲ. ನಮ್ಮ ಮೇಲಿನ ದ್ವೇಷಕ್ಕಾಗಿ ಪಾದಯಾತ್ರೆ ಹತ್ತಿಕ್ಕುವ ಹುನ್ನಾರದಿಂದ ರೂಪಿಸಿದ ನಿಯಮಗಳು ಎಂದು ಕಿಡಿಕಾರಿದ್ದಾರೆ. ಸರ್ಕಾರ ಯಾವುದೇ ಪ್ರತಿಭಟನೆ, ರ್ಯಾಲಿ, ಧರಣಿ ಮಾಡಬೇಡಿ ಎಂದು ಹೇಳಿದೆ. ನಾವು ಅದಾವುದನ್ನೂ ಮಾಡುವುದಿಲ್ಲ. ನೀರಿಗಾಗಿ ನಡೆಯುತ್ತೇವೆ.
ರಾಜ್ಯದ ಹಿತಕ್ಕಾಗಿ, ರೈತರ ಅನುಕೂಲಕ್ಕಾಗಿ, ಬೆಂಗಳೂರಿನ ಜನರಿಗೆ ಕಾವೇರಿ ಕೊಡಿಸಲು, ಅವರಿಗೂ ನೀರು ಕುಡಿಸಲು ಪ್ರಾರ್ಥನೆ ಮಾಡಿಕೊಳ್ಳುವ ಸಲುವಾಗಿ ನಾವು ನಡೆಯುತ್ತಿದ್ದೇವೆ. ನಮ್ಮದು ನೀರಿಗಾಗಿ ನಡಿಗೆ ಕಾರ್ಯಕ್ರಮ ಎಂದು ಹೇಳಿದರು.
ಕೋವಿಡ್ ಶಿಷ್ಟಾಚಾರ ನಿಯಮಗಳನ್ನು ನಾವು ಗೌರವಿಸುತ್ತೇವೆ ಹಾಗೂ ಪಾಲಿಸುತ್ತೇವೆ. ಹಾಗೆಂದ ಮಾತ್ರಕ್ಕೆ ಮನೆಯಿಂದ ಹೊರಗೆ ಯಾರೂ ಓಡಾಡಬಾರದು ಎಂಬ ನಿಯಮವೇನಿಲ್ಲ. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಮಾರ್ಗವನ್ನು ಇಂದು ಪರಿಶೀಲನೆ ಮಾಡುತ್ತಿದ್ದೇವೆ. ನಗರ ವ್ಯಾಪ್ತಿಯಲ್ಲಿ ಯಾವ ರೀತಿಯ ಶಿಷ್ಟಾಚಾರ ಪಾಲನೆ ಮಾಡಬೇಕೆಂಬುದನ್ನು ಪಕ್ಷದ ನಾಯಕರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.
ರಾಜ್ಯ ಸರ್ಕಾರ ವೀಕೆಂಡ್ ಲಾಕ್‍ಡೌನ್, ನೈಟ್ ಕರ್ಫ್ಯೂ ಮೂಲಕ ಜನಸಾಮಾನ್ಯರ ಜೀವ ಹಿಂಡುತ್ತಿದೆ. ವ್ಯಾಪಾರಿಗಳು, ವರ್ತಕರು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇರುವವರು, ಬೀದಿಬದಿ ವ್ಯಾಪಾರಿಗಳು, ಸಣ್ಣಪುಟ್ಟ ಕಿರಾಣಿ ಅಂಗಡಿಯವರು, ಬೃಹತ್ ಉದ್ಯಮಿಗಳು ಎಲ್ಲರೂ ನಲುಗಿ ಹೋಗಿದ್ದಾರೆ. ಅವರ ಶಾಪ ತಡೆದುಕೊಳ್ಳಲಾಗದಷ್ಟು ತೀವ್ರವಾಗಿದೆ. ಸರ್ಕಾರವೇ ಜನರನ್ನು ಕೊಲೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
100 ನಾಟ್ ಔಟ್ ಪ್ರತಿಭಟನೆ ಮಾಡಿದ ಕಾರಣಕ್ಕಾಗಿ ನಮ್ಮ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. ಆದರೆ ಬಿಜೆಪಿಯ ಶಾಸಕರು, ಮುಖಂಡರು ನಡೆಸಿದ ಪ್ರತಿಭಟನೆ, ಜನಾರ್ಶೀವಾದ ರ್ಯಾಲಿ ಸೇರಿದಂತೆ ಯಾವುದಕ್ಕೂ ಪ್ರಕರಣ ದಾಖಲಿಸಿಲ್ಲ. ಇವರೇನು ಮನುಷ್ಯರೇ?
ಕಾನೂನು ಅವರಿಗೊಂದು ನಮ್ಮಗೊಂದು ಇದೆಯೇ? ಆರೋಗ್ಯ ಸಚಿವ ಸುಧಾಕರ್ ಅವರು, ಕೋವಿಡ್ ಅಲೆ ತೀವ್ರವಾಗಿದ್ದಾಗ ಮಕ್ಕಳೊಂದಿಗೆ ಈಜುಕೊಳದಲ್ಲಿ ಈಜಾಡುತ್ತಿದ್ದರು. ಆಗಲೂ ಕಾನೂನು ಜಾರಿಯಲ್ಲಿತ್ತು. ಅವರ ಮೇಲೆ ಏಕೆ ಕೇಸ್ ದಾಖಲಿಸಿಲ್ಲ? ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮದುವೆಗಳಿಗೆ ಹೋಗಿದ್ದರು, ಶ್ರೀರಾಮುಲು ಸಾರ್ವಜನಿಕ ರ್ಯಾಲಿ ಮಾಡಿದ್ದರು ಅವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

Articles You Might Like

Share This Article