ಬೆಂಗಳೂರು,ಮಾ.2- ಕಡಿಮೆ ಅಂಕ ಪಡೆದವರು ವಿದೇಶಕ್ಕೆ ಓದಲು ಹೋಗಿದ್ದಾರೆ ಎಂದು ಹೇಳುವ ಮೂಲಕ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಗ್ಪುರದ ಶಿಕ್ಷಣ ನೀತಿಯನ್ನು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಅತ್ಯುತ್ತಮವಾಗಿದೆ ಬೇರೆ ದೇಶಗಳಿಂದ ಓದಲು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ.
ಆದರೆ, ಶಿಕ್ಷಣದ ವೆಚ್ಚ ಹೆಚ್ಚಾಗಿದೆ. ಹಾಗಾಗಿ ಕೆಲವರು ವಿದೇಶಕ್ಕೆ ಓದಲು ಹೋಗುತ್ತಿದ್ದಾರೆ. ಉಕ್ರೇನ್‍ನಲ್ಲಿ ಸೆಲ್ ದಾಳಿಗೆ ಮೃತಪಟ್ಟ ನವೀನ್ ಗ್ಯಾನಗೌಡರ್ ಪ್ರತಿಭಾವಂತ ವಿದ್ಯಾರ್ಥಿ. ಪಿಯುಸಿಯಲ್ಲಿ ಶೇ.97ರಷ್ಟು ಅಂಕ ಪಡೆದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಕಡಿಮೆ ಅಂಕ ಪಡೆದವರು ವಿದೇಶಕ್ಕೆ ಹೋಗಿದ್ದಾರೆ ಎಂದು ಹೇಳುವ ಮೂಲಕ ವಿದ್ಯಾರ್ಥಿಗಳ ಸ್ವಾಭಿಮಾನ ಕೆಣಕಿದ್ದಾರೆ ಎಂದು ಕಿಡಿಕಾರಿದರು.
ವಿದ್ಯಾರ್ಥಿಗಳಿಗೆ ಸರ್ಕಾರವನ್ನೇ ಬದಲಾವಣೆ ಮಾಡುವ ಶಕ್ತಿ ಇದೆ. ಕೇಂದ್ರ ಸಚಿವರು ಕೂಡಲೇ ಕ್ಷಮೆ ಯಾಚಿಸಬೇಕು. ವಿದೇಶದಲ್ಲಿ ಇರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ನವೀನ್ ಸಾವಿಗೆ ಸರ್ಕಾರವೇ ಹೊಣೆಯಾಗಿದ್ದು, ಅವರ ಕುಟುಂಬದವರ ಕ್ಷಮೆಯಾಚಿಸಬೇಕು. ಪಾದಯಾತ್ರೆ ಮುಗಿದ ಬಳಿಕ ನಾವು ನವೀನ್ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತೇವೆ ಎಂದರು.
ನವೀನ್ ಅವರ ಪ್ರತಿಭೆಯನ್ನು ಗುರುತಿಸಲು ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ 63 ಮೆಡಿಕಲ್ ಕಾಲೇಜುಗಳಿಗೆ. ಮೂಲೆ ಮೂಲೆಯಿಂದಲೂ ಶಿಕ್ಷಣ ಪಡೆಯಲು ಇಲ್ಲಿಗೆ ಬರುತ್ತಾರೆ. ಈ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಹಾಳು ಮಾಡುತ್ತಿದೆ. ಕೇಂದ್ರ ಸರ್ಕಾರ ರೂಪಿಸಿರುವ ಶಿಕ್ಷಣ ನೀತಿ ಐದು ವರ್ಷಗಳ ಕೋರ್ಸ್‍ಗೆ ಒಂದೇ ವರ್ಷದಲ್ಲಿ ಸರ್ಟಿಫಿಕೇಟ್ ಕೊಡಲು ಹೊರಟಿದೆ. ಹಳೆ ಸಂಪ್ರದಾಯಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ನಾಗ್ಪುರದ ಶಿಕ್ಷಣ ನೀತಿಯನ್ನು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮುಂದುವರೆಸುವುದಿಲ್ಲ ಎಂದು ಹೇಳಿದ್ದಾರೆ.
