ಡಿಕೆಶಿಗೆ ಪರೋಕ್ಷ ಟಾಂಗ್ ನೀಡಿದ ದಿನೇಶ್ ಗುಂಡೂರಾವ್

Social Share

ಬೆಂಗಳೂರು,ಸೆ.18- ವಿಧಾನಸಭೆಯ ಟಿಕೆಟ್ ಹಂಚಿಕೆ ಒಬ್ಬರ ಜವಾಬ್ದಾರಿಯಲ್ಲ. ಹಲವು ಸಮಿತಿಗಳು ಚರ್ಚಿಸಿ ಪಾರದರ್ಶಕವಾಗಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿಯ ಹಾಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರು, ಭಾರತ ಐಕ್ಯತಾ ಯಾತ್ರೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡದವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್, ಟಿಕೆಟ್ ಹಂಚಿಕೆಗೆ ಚುನಾವಣಾ ಸಮಿತಿ, ಪರಿಶೀಲನಾ ಸಮಿತಿ ಎಂದು ಹಲವು ಹಂತಗಳಿವೆ. ಎಲ್ಲರೂ ಚರ್ಚೆ ಮಾಡಿ ಪಾರದರ್ಶಕವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.

ನಾನೇ ಮಾಡುತ್ತೇನೆ. ನನ್ನಿಂದಲೇ ನಡೆಯುತ್ತದೆ ಎಂಬುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಭಾರತ್ ಜೋಡೋ ಯಾತ್ರೆಯನ್ನು ಕರ್ನಾಟಕದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಬೇಕು ಎಂಬುದು ಕೆಪಿಸಿಸಿ ಅಧ್ಯಕ್ಷರಿಗೆ ಅತ್ಯುತ್ಸಾಹವಿದೆ. ಆ ಭರದಲ್ಲಿ ಒಂದಿಷ್ಟು ಮಾತುಗಳನ್ನು ಹೇಳಿರಬಹುದು. ಆದರೆ ಪರಿಸ್ಥಿತಿ ಹಾಗಿಲ್ಲ ಎಂದರು.

ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ಮೇಲೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ಅಧ್ಯಕ್ಷರ ಸೂಚನೆ ಮೇರೆಗೆ ಕೆಲಸ ಮಾಡಿದ್ದೇವೆ. ಇತ್ತೀಚೆಗೆ ಮೇಕೆದಾಟು, ಸ್ವತಂತ್ರ ನಡಿಗೆ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಪ್ರೀತಿ ವಿಶ್ವಾಸದಿಂದ ಎಲ್ಲರನ್ನೂ ಒಮ್ಮತದಿಂದ ಕರೆದೊಯ್ದರೆ ಇನ್ನಷ್ಟು ಯಶಸ್ವಿಯಾಗಲು ಸಾಧ್ಯ ಎಂದರು.

ಭಾರತ್ ಜೋಡೊ ಯಾತ್ರೆಗೆ ಮುಖಂಡರಾದಿಯಾಗಿ ಬಹಳಷ್ಟು ಕಾರ್ಯಕರ್ತರು ಅರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂ ದೇಶದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಯಾತ್ರೆ ಮಾಡುತ್ತಿರುವುದರಿಂದ ಅದು ಯಶಸ್ವಿಯಾಗುತ್ತಿದೆ ಎಂದು ಹೇಳಿದರು.

Articles You Might Like

Share This Article