ಡಿಕೆಶಿಯವರೇ ಯಾರ ಸ್ವಾತಂತ್ರ್ಯಕ್ಕಾಗಿ ನಿಮ್ಮ ಈ ನಡಿಗೆ..?

Social Share

ಬೆಂಗಳೂರು, ಆ.9- ಸ್ವಾತಂತ್ರ್ಯೋತ್ಸವದ ನಡಿಗೆ ಎಂದು ಹೊರಟಿದ್ದೀರಿ. ಯಾರ ಸ್ವಾತಂತ್ರ್ಯಕ್ಕಾಗಿ ಬಿಡಿಸಿ ಹೇಳುವಿರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ ಎಂದು ಕೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟ ಮಾಡಿದ್ದೇ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಅಪ್ರಭುದ್ಧತೆಯ ಪ್ರತೀಕ ಮತ್ತು ಪರಮ ಬಾಲಿಶ ಎಂದು ಟೀಕಿಸಿದ್ದಾರೆ. ಡಿಕೆಶಿ ಅವರಿಗೆ ಗೊತ್ತಿರಲಿ, 1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ. ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಡಲು ಮಹಾತ್ಮಗಾಂಧಿ ನೇತೃತ್ವದ ಕಾಂಗ್ರೆಸ್ ಹೋರಾಟ ಮಾಡಿತ್ತು. ನಂತರದ ಕಾಂಗ್ರೆಸ್ ಮಾಡಿದ್ದೇ ಸ್ವಾತಂತ್ರ್ಯದ ಮಾರಣಹೋಮ ಎಂದು ಆರೋಪಿಸಿದ್ದಾರೆ.

ಮಾಡಿದ ಪಾಪಕ್ಕೆ ಇವತ್ತಿನ ಕಾಂಗ್ರೆಸ್ ಶಾಸ್ತಿ ಅನುಭವಿಸುತ್ತಿದೆ. ನಾನು ಮುಖ್ಯಮಂತ್ರಿ ಆಗಿದ್ದು ಅಂದು ರಾಷ್ಟ್ರಪಿತರು ತಂದುಕೊಟ್ಟ ಸ್ವಾತಂತ್ರ್ಯ ಹಾಗೂ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಜಗತ್ ಮಾನ್ಯ ಸಂವಿಧಾನದ ಕಾರುಣ್ಯದಿಂದ. ಇದರಲ್ಲಿ ಕಾಂಗ್ರೆಸ್ ಪಾತ್ರ ಶೂನ್ಯ ಎಂದಿದ್ದಾರೆ.

ನಾನು ಪಂಡಿತ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಹಗುರವಾಗಿ ಮಾತನಾಡಲಾರೆ. ಅವರ ನಂತರ ಕಾಂಗ್ರೆಸ್ ಹೇಗೆಲ್ಲೇ ಹಾದಿತಪ್ಪಿ ಜನರ ಸ್ವಾತಂತ್ರ್ಯ ಹರಣ ಮಾಡಿತು ಎನ್ನುವದನ್ನು ಡಿ.ಕೆ.ಶಿವಕುಮಾರ್ ಅವರು ಇತಿಹಾಸ ಓದಿದರೆ ಸತ್ಯ ಅರಿವಾಗುತ್ತದೆ.

ಸಂವಿಧಾನ ಕೊಟ್ಟವರು, ದೇಶದ ಮೊದಲನೇ ಸಂಪುಟದಲ್ಲಿ ಸಚಿವರಾಗಿದ್ದವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ಅಂಥ ಮಹನೀಯರನ್ನು ಸಂಸತ್ತಿಗೇ ಮತ್ತೆ ಬಾರದಂತೆ ತಡೆದು, ಭಾರತದ ದೀನದಲಿತರ ದನಿಯನ್ನು ನಿರ್ದಯವಾಗಿ ಅಡಗಿಸಿದ ಪಕ್ಷದ ನಾಯಕರು ಇವತ್ತು ಸ್ವಾತಂತ್ಯದ ಭಜನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು. ಡಿ.ಕೆ.ಶಿವಕುಮಾರ್ ಅವರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು. ಅಲ್ಲದೆ, ಪಕ್ಷದಲ್ಲಿ ನಿಮ್ಮ ಸ್ವಾತಂತ್ರ್ಯಹರಣ ಮಾಡುತ್ತಿರುವವರ ಕಡೆ ಗಮನ ಹರಿಸಿ ಎಂದು ಕಿವಿಮಾತು ಹೇಳಿದ್ದಾರೆ.

Articles You Might Like

Share This Article