ಗೃಹ ಸಚಿವರು ಇನ್ನೂ ಎಳಸು: ಡಿಕೆಶಿ ಲೇವಡಿ

Social Share

ಬೆಂಗಳೂರು, ಜ.1- ರಸ್ತೆಯಲ್ಲಿ ನಡೆಯಲು ಗೃಹ ಸಚಿವರ ಅನುಮತಿ ಪಡೆಯಬೇಕಾ ಎಂದು ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಗೃಹ ಸಚಿವರು ಇನ್ನೂ ಎಳಸು ಎಂದು ಲೇವಡಿ ಮಾಡಿದ್ದಾರೆ.  ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಆಯೋಜಿಸಿರುವ ಪಾದಯಾತ್ರೆಗೆ ಡಿ.ಕೆ.ಶಿವಕುಮಾರ್ ಅವರು ಪೂರ್ವ ತಯಾರಿ ನಡೆಸುತ್ತಿದ್ದು, ವಾರದಿಂದ ಪ್ರತಿದಿನ ಸ್ಯಾಂಕಿ ಕೆರೆಯ ಸುತ್ತ ಪ್ರತಿದಿನ ಬೆಳಗ್ಗೆ ಬಿರುನಡಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಜನವರಿ 9 ರಿಂದ 19 ರವರೆಗೆ ಪಾದಯಾತ್ರೆ ನಡೆಯಲಿದ್ದು, ಪ್ರತಿನಿತ್ಯ 15 ಕಿ.ಮೀ ನಡೆಯಬೇಕಿದೆ.
ಪಾದಯಾತ್ರೆಗೆ ಮೇಕೆದಾಟಿನಿಂದ ಹಿಡಿದು ನ್ಯಾಷನಲ್ ಕಾಲೇಜ್‍ವರೆಗೆ ಮಾರ್ಗವನ್ನು ನಿಗದಿ ಮಾಡಲಾಗಿದೆ. ಪಾದಯಾತ್ರೆಯ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್ ಅವರು, ಅರಗಜ್ಞಾನೇಂದರರ ಅವರು ವಯಸ್ಸಲ್ಲಿ ದೊಡ್ಡವರಿರಬಹದು, ಆದರೆ ರಾಜಕೀಯ ಎಳಸು. ಹೋರಾಟ ಮಾಡುವುದಕ್ಕೂ ಅನುಮತಿ ಕೇಳಬೇಕಾ ?. ಅವರಿಗೆ ಅನುಭವದ ಕೊರತೆ ಇದೆ ಎಂದಿದ್ದಾರೆ.
ಮೇಕೆದಾಟು ಯೋಜನೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಿಸ್ತೃತ ಯೋಜನಾ ವರದಿ ಸಿದ್ದ ಪಡಿಸಲಾಗಿತ್ತು. ಅದರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಮಂಜೂರಾತಿಯನ್ನು ಪಡೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದಿಂದ ಅರಣ್ಯ ಮತ್ತು ಪರಿಸರ ಇಲಾಖೆಯ ನಿರಪೇಕ್ಷಣಾ ಪತ್ರ ಪಡೆಯುವುದು ಮಾತ್ರ ಬಾಕಿ ಇದೆ. ಅದನ್ನು ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಕೊಡಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಪಾದಯಾತ್ರೆಯಲ್ಲಿ ನನಗೆ ವೈಯುಕ್ತಿಕವಾಗಿ ಏನೂ ಇಲ್ಲ. ನನ್ನಲ್ಲಿ ಹೋರಾಟದ ಸಣ್ಣ ಗುಣ ಇದ್ದಿದ್ದಕ್ಕೆ ರಾಜಕೀಯದಲ್ಲಿ ನಿಂತಿದ್ದೇನೆ. ನಾನು ರಾಜಕೀಯಕ್ಕೆ ಬಂದಾಗ ದೇವೇಗೌಡರ ಎದುರು ಚುನಾವಣೆಗೆ ನಿಲ್ಲಿಸಿದರು. ಅಂದು ಸೋಲು ಕಂಡಿರಬಹುದು, ಆದರೆ ಹೋರಾಟ ಉಳಿದಿತ್ತು ಎಂದರು.
ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಬಹುದು, ಇಂತವರೇ ಬರಬೇಕೆಂಬ ನಿರ್ಬಂಧವಿಲ್ಲ. ನೆಲ, ಜಲದ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಪಾದಯಾತ್ರೆಗೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನಾಲ್ಕೈದು ಅಂಬ್ಯುಲೆನ್ಸ್ ಜೊತೆಯಲ್ಲಿರಲಿವೆ. ಬಂದವರಿಗೆ ಎಳನೀರು ಕೊಡಲು ಸ್ಥಳೀಯರು ಸಿದ್ಧರಿದ್ದಾರೆ. ನಾವು ಯಾರನ್ನು ಬಲವಂತ ಮಾಡುವುದಿಲ್ಲ. ಎಷ್ಟೇ ಜನ ಬಂದರೂ ಆಹ್ವಾನವಿದೆ ಎಂದರು.
ಇದೇ ವೇಳೆ ಹೊಸ ವರ್ಷ ಶುಭಾಷಯಗಳನ್ನು ತಿಳಿಸಿದ ಅವರು, ರಾಜ್ಯದ ಜನತೆಗೆ ಆರೋಗ್ಯ ಸಿಗಲಿ. ಎಲ್ಲರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮವಾಗಿದೆ. ಹೊಸ ಕಾಯಿಲೆ ಕೂಡ ದೂರ ಹೋಗಬೇಕು ಎಂದು ಹಾರೈಸಿದರು.
ವಿಮಾನನಿಲ್ದಾಣದಲ್ಲಿ ದೊಡ್ಡ ದಂಧೆ ನಡೆಯುತ್ತಿದೆ. ವಿದೇಶದಿಂದ ಬಂದವರಿಗೆ ನೆಗಡಿ ಬಂದಿದ್ದರೂ ಕೊರೊನಾ ಪಾಸಿಟಿವ್ ಎಂದು ವರದಿ ನೀಡಲಾಗುತ್ತಿದೆ. ಮುಖ್ಯಮಂತ್ರಿ ಅವರು ಈ ಬಗ್ಗೆ ಗಮನ ಹರಿಸಬೇಕು. ಒಬ್ಬರ ಬಳಿ ಮೂರು ಸಾವಿರ ವಸೂಲಿ ಮಾಡಲಾಗುತ್ತಿದೆ. ಮೊದಲು ವಸೂಲಿ ನಿಲ್ಲಿಸಲಿ ಎಂದು ಆಗ್ರಹಿಸಿದರು.

Articles You Might Like

Share This Article